ಕೇಂದ್ರ ಸರಕಾರ ಸ್ವಾಮ್ಯದ ರೈತ ಉತ್ಪಾದಕರ ಸಂಸ್ಥೆಯ ಕಚೇರಿ ಶೀಘ್ರದಲ್ಲಿಯೇ ಪ್ರಾರಂಭ; FPO  ನೂತನ ಅಧ್ಯಕ್ಷ ಡಾ.ಸುರೇಶ ಆರ್ ಸಜ್ಜನ್ ಹೇಳಿಕೆ


ಸುರಪುರ ಟೈಮ್ಸ್ ವಾರ್ತೆ

ಸುರಪುರ : ಕೇಂದ್ರ ಸರಕಾರ ಸ್ವಾಮ್ಯದ ರೈತ ಉತ್ಪಾದಕರ ಸಂಸ್ಥೆಯ (ಫಾಮರ‍್ಸ್ ಪ್ರೋಡುರ‍್ಸ್ ಆರ್ಗನೈಜೇಷನ್) ಕಚೇರಿ ಶೀಘ್ರದಲ್ಲಿಯೇ ಸುರಪುರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಎಫ್‌ಪಿಒ ನ ತಾಲೂಕು ಘಟಕದ ನೂತನ ಅಧ್ಯಕ್ಷ ಮತ್ತು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಫ್‌ಪಿಒ ಗೆ ಬೀಜ, ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳ ಪೂರೈಕೆ, ಮಾರುಕಟ್ಟೆ ಸಂಪರ್ಕ, ತರಬೇತಿ ಮತ್ತು ನೆಟ್‌ವರ್ಕಿಂಗ್ ಹಾಗೂ ಹಣಕಾಸು ಮತ್ತು ತಾಂತ್ರಿಕ ಸಲಹೆ ಸೇರಿವೆ. ಇದಕ್ಕೆ ಕೇಂದ್ರ ಸರಕಾರವು ಪ್ರಾಶಸ್ತ್ಯ  ನೀಡುತ್ತಿದ್ದು ಇದರಿಂದ ರೈತರಿಗೆ ವಿಶೇಷವಾಗಿ ಸಾಕಷ್ಟು ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.
ಪ್ರಥಮ ಅಧ್ಯಕ್ಷನಾಗಿ ತಾಲೂಕಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದಕ್ಕೆ ನಿರ್ದೇಶಕರ ಮಂಡಳಿಯು ಇದ್ದು ಶೀಘ್ರವೇ ಕಾರ್ಯಚಟುವಟಿಕೆಗಳು ಶುರುವಾಗಲಿವೆ. ಇದರಿಂದ ಈ ಭಾಗದ ರೈತರಿಗೆ ಎಫ್‌ಪಿಒ ದಿಂದ ಆಗುವ ಪ್ರಯೋಜನಗಳನ್ನು ಮನವರಿಕೆ ಮಾಡಿ ಅವರಿಗೆ ಒದಗಿಸಲಾಗುವುದು. ಈ ಸಂಘಕ್ಕೆ ಕೇಂದ್ರ ಸರಕಾರದ ಬೆಂಬಲ ನೀಡುತ್ತದೆ ಎಂದು ಹೇಳಿದರು.
2025 ರಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸಮೀಕ್ಷೆ ಸಮರ್ಪಕವಾಗಿಲ್ಲ ಸಾಕಷ್ಟು ರೈತರಿಗೆ ಪರಿಹಾರ ಸಿಕ್ಕಿಲ್ಲ. ಸರಕಾರ ಮತ್ತೊಮ್ಮೆ ಸಮೀಕ್ಷೆ ಮಾಡಿಸಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಜೂನ್‌ನಲ್ಲಿ ಬಿತ್ತನೆಗೆ ಸಹಾಯವಾಗುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ನಯೋಪ್ರಾ ಮಾಜಿ ಅಧ್ಯಕ್ಷ ಪ್ರಕಾಶ ಸಜ್ಜನ್, ಸೋಮನಾಥ ಡೊಣ್ಣಿಗೇರಾ, ರಾಘವೇಂದ್ರ ಬಾಡಿಹಾಳ, ಶಿವರಾಜ್ ಅವಂಟಿ, ಸಾಧಿಕ್ ದಖನಿ, ಚನ್ನಪ್ಪ ಎಲಿಗಾರ ಇದ್ದರು.

ನೂರು ಕೋಟಿ ಬಡ್ಡಿ ರಹಿತ ಸಾಲ
ಕೆವೈಡಿಸಿಸಿ ಬ್ಯಾಂಕ್‌ಗೆ ಎರಡನೇ ಬಾರಿಗೆ ನಿರ್ದೇಶಕನಾಗಿ ಆಯ್ಕೆಯಾಗಿರುವೆ. ಸುರಪುರ ತಾಲೂಕಿನಿಂದ ಈ ಬಾರಿ ಮೂವರು ನಿರ್ದೇಶಕರು ಆಯ್ಕೆಯಾಗಿರುವುದು ಸಂತೋಷದ ಸಂಗತಿ. ವಿಶೇಷವಾಗಿ ನಮ್ಮ ತಾಲೂಕಿನವರೆಯಾದ ವಿಠ್ಠಲ ಯಾದವ ಅವರು ಕೆವೈಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಷಯ ಮತ್ತು ಪಕ್ಷಾತೀತವಾಗಿ ಅವರಿಗೆ ಸಂಪೂರ್ಣ ಬೆಂಬಲವಿದೆ. ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರ, ನಿರ್ದೇಶಕರ ಸಹಕಾರದಿಂದ ನಮ್ಮ ಜಿಲ್ಲೆಯ ರೈತರಿಗೆ ೧೦೦ ಕೋಟಿ ರೂ. ಬಡ್ಡಿ ರೈತ ಸಾಲ ನೀಡಿರುತ್ತೇವೆ. ಅದೇ ರೀತಿ ಈಗಲೂ ಈ ಭಾಗದ ರೈತರಿಗೆ, ಸಹಕಾರಿಗಳಿಗೆ ಮತ್ತು ಉದ್ಯಮಿಗಳಿಗೆ ಸಹಕಾರ ನೀಡಲು ಕಂಕಣಬದ್ಧವಾಗಿರುತ್ತೇವೆ. ಪಕ್ಷಾತೀತವಾಗಿ ಈ ಭಾಗದ ರೈತರ ಏಳಿಗೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಸಜ್ಜನ್ ಭರವಸೆ ನೀಡಿದರು.

ಶಹಾಪುರದಲ್ಲಿ ಕೋಲ್ಡ್ ಸ್ಟೋರೇಜ್
ನಮ್ಮ ಸಹೋದರ ನಯೋಪ್ರಾ ಮಾಜಿ ಅಧ್ಯಕ್ಷ ಪ್ರಕಾಶ ಸಜ್ಜನ್ ಅವರು ಹೊಸ ವರ್ಷದಲ್ಲಿ ರೈತರಿಗೋಸ್ಕರ ಶಹಾಪುರ ತಾಲೂಕಿನಲ್ಲಿ 10 ಕೋಟಿ ವೆಚ್ಚದಲ್ಲಿ ಶಿವ ಸಜ್ಜನ್ ಅಗ್ರಿಕಲ್ಚರ್ ಪ್ರೋಡಕ್ಟ್ ಎಂಬ ಹೆಸರಿನಿಂದ ಕೋಲ್ಡ್ ಸ್ಟೋರೇಜ್ ಪ್ರಾರಂಭಿಸಿದ್ದಾರೆ. ಈ ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಹೆಚ್ಚು ಸಂಗ್ರಹಿಸುತ್ತಾರೆ. ಅದೇ ರೀತಿ ತೊಗರಿ, ಹೆಸರು, ಅಲಸಂದಿ, ಕಡಲೆ, ಉದ್ದು, ಹುಣಸಿಕಾಯಿ ಕೂಡ ಸ್ಟೋರೇಜ್‌ನಲ್ಲಿ ಇಡುತ್ತಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಂದಾಗ ಮಾರುತ್ತಾರೆ. ಜಿಲ್ಲೆಯಲ್ಲಿ ಸರಕಾರದ ಕೋಲ್ಡ್ ಸ್ಟೋರೇಜ್‌ಗಳು ಇಲ್ಲ. ಈ ಮುಂಚೆ ಬೇರೆಯವರು ಮಾಡಿದ್ದರು ನಂತರ ಮುಂದುವರೆಸಿಕೊಂಡು ಹೋಗಲಿಲ್ಲ. ನಮ್ಮ ಸಹೋದರರು ಖರೀದಿಸಿ ಅವರಿಗೆ ಲೀಜ್ ಕೊಟ್ಟಿದ್ದಾರೆ. ಈಗ ರಿಯಾಯಿತಿ ದರದಲ್ಲಿ ಒಂದು ವರ್ಷಕ್ಕೆ ಮೆಣಸಿನಕಾಯಿ ಚೀಲವೊಂದಕ್ಕೆ 220 ರೂ. ನಿಗದಿಪಡಿಸಲಾಗಿದೆ. ಕಾಳುಕಡಿಗೆ ಬೇರೆ ರಿಯಾಯಿತಿ ದರ ಗೊತ್ತಪಡಿಸಲಾಗಿದೆ.ಇಲ್ಲಿಯ ರೈತರು ಸ್ಟೋರೇಜ್‌ಗಾಗಿ ದೇವದುರ್ಗ, ರಾಯಚೂರು ಮತ್ತು ಪಕ್ಕದ ಆಂಧ್ರ ಪ್ರದೇಶಕ್ಕೆ ಹೋಗಬೇಕಾಗಿತ್ತು. ಆದರೆ ಶಹಾಪುರದಲ್ಲಿ ಸ್ಥಾಪಿಸಿರುವುದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ. ರೈತ ಬಾಂಧವರು ಇದರ ಸದಪಯೋಗಪಡೆದುಕೊಳ್ಳಬೇಕು ಎಂದು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!