ಕಾಲದ ಮೌಲ್ಯವನ್ನು ಅರಿಯಲು, ಸಮಯ ನಿರ್ವಹಣೆಯ ಅಭ್ಯಾಸ ಬೆಳೆಸಲು ಕ್ಯಾಲೆಂಡರ್ ಅವಶ್ಯಕ; ಡಾ.ಸುರೇಶ ಸಜ್ಜನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕಾಲದ ಮೌಲ್ಯವನ್ನು ಅರಿಯಲು, ಸಮಯ ನಿರ್ವಹಣೆಯ ಅಭ್ಯಾಸ ಬೆಳೆಸಲು ಹಾಗೂ ಶಿಸ್ತಿನ ಬದುಕನ್ನು ರೂಪಿಸಲು ಕ್ಯಾಲೆಂಡರ್ ಅವಶ್ಯಕ ಪಾತ್ರವಹಿಸುತ್ತದೆ. ಡಿಜಿಟಲ್ ಯುಗದಲ್ಲಿಯೂ ಕೂಡ ಗೋಡೆ ಕ್ಯಾಲೆಂಡರ್ ಹಾಗೂ ಪಾಕೆಟ್ ಕ್ಯಾಲೆಂಡರ್‌ಗಳು ಜನರ ಮನೆ-ಕಚೇರಿಗಳಲ್ಲಿ ತಮ್ಮ ಮಹತ್ವವನ್ನು ಉಳಿಸಿಕೊಂಡಿವೆ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸುರೇಶ ಸಜ್ಜನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಶಿವ ಸಜ್ಜನ್ ಅಗ್ರಿಕಲ್ಚರ್ ಪ್ರೋಡಕ್ಟ್ ಕೋಲ್ಡ್ ಸ್ಟೋರೇಜ್ ನವರ 2026ನೇ ವರ್ಷದ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಕ್ಯಾಲೆಂಡರ್‌ಗಳು ಪ್ರತಿಯೊಬ್ಬರಿಗೂ ಒಂದಲ್ಲ, ಒಂದು ರೀತಿಯಲ್ಲಿ ಅನುಕೂಲವಾಗುತ್ತವೆ. ಸಮಯವನ್ನು ವಿಂಗಡಿಸಿ, ಆಯೋಜಿಸಲು ಅತ್ಯಗತ್ಯ ಸಾಧನವಾಗಿದೆ ಎಂದು ತಿಳಿಸಿದರು.
ಕ್ಯಾಲೆಂಡರ್‌ಗಳಿಂದ ಹಬ್ಬಗಳು, ವಿಶೇಷ ದಿನಗಳು, ಋತುಗಳ ಬದಲಾವಣೆ, ಮತ್ತು ಮಹಾನ್ ವ್ಯಕ್ತಿಗಳ ಜಯಂತಿ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳು ಸಿಗುತ್ತವೆ. ನಿಗದಿತ ಕೆಲಸಗಳು, ಸಭೆಗಳು ಮತ್ತು ಗಡುವನ್ನು ಗುರುತಿಸಲು ಸಹಾಯ ಮಾಡುತ್ತದೆ. ದೈನಂದಿನ ಕಾರ್ಯಗಳನ್ನು ಸುಲಭವಾಗಿ ಆಯೋಜಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕ್ಯಾಲೆಂಡರ್‌ನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮತ್ತು ಶಿವ ಸಜ್ಜನ್ ಅಗ್ರಿಕಲ್ಚರ್ ಪ್ರೋಡಕ್ಟ್ ಕೋಲ್ಡ್ ಸ್ಟೋರೇಜ್‌ನ ಮುಖ್ಯಸ್ಥ ಪ್ರಕಾಶ ಸಜ್ಜನ್ ಮಾತನಾಡಿ, ಕ್ಯಾಲೆಂಡರ್ ಬಿಡುಗಡೆ ಸಂತೋಷದ ಸಂಗತಿ. ಕ್ಯಾಲೆಂಡರ್ ಮಾನವನ ಅವಶ್ಯಕತೆಗಳಲ್ಲಿ ಒಂದಾಗಿದೆ. ಪ್ರತಿ ದಿನ ಎದ್ದ ತಕ್ಷಣ ಕ್ಯಾಲೆಂಡರ್ ಗಮನಿಸುತ್ತಾರೆ. ಹತ್ತು ಹಲವಾರು ವಿಷಯಗಳ ಮಾಹಿತಿಯನ್ನು ಕ್ಯಾಲೆಂಡರ್ ಒದಗಿಸುತ್ತದೆ ಎಂದರು. ಪ್ರಮುಖರಾದ ರಾಘವೇಂದ್ರ ಬಾಡಿಹಾಳ, ಸೋಮನಾಥ ಡೊಣ್ಣಿಗೇರೆ, ಶಫೀಕ್ ದಖನಿ, ಶಿವರಾಜ್ ಅವಂಟಿ, ಚನ್ನಪ್ಪ ಎಲಿಗಾರ ಇದ್ದರು.






