ಜ್ಞಾನಕ್ಕಿಂತ ಹೆಚ್ಚಾದ ಶಕ್ತಿ ಮತ್ತೊಂದಿಲ್ಲ, ಅತ್ಯಂತ ಶಕ್ತಿಶಾಲಿ ಆಯುಧ ಶಿಕ್ಷಣ;ಡಾ.ರಾಜಶೇಖರ ಶಿವಾಚಾರ್ಯರು

ಸುರಪುರ ಟೈಮ್ಸ್ ವಾರ್ತೆ

ಸುರಪುರ:ಜ್ಞಾನಕ್ಕಿಂತ ಹೆಚ್ಚಾದ ಶಕ್ತಿ ಮತ್ತೊಂದಿಲ್ಲ. ಈ ಭೂಮಿ ಮೇಲೆ ಅದು ಅತ್ಯಂತ ಶಕ್ತಿಶಾಲಿ ಆಯುಧ. ಮನುಷ್ಯನಿಗೆ ಅನ್ನ, ನೀರು ಎಷ್ಟು ಮುಖ್ಯವೋ ಶಿಕ್ಷಣವೂ ಮುಖ್ಯ. ಶಿಕ್ಷಣಕ್ಕೆ ಅಷ್ಟೊಂದು ಶಕ್ತಿ ಇದೆ ಎಂದು ಕಲಬುರಗಿಯ ಚೌವುದಾಪುರಿ-ಬ್ರಹ್ಮಪುರ ಹಿರೇಮಠದ ಪೀಠಾಧಿಪತಿ ರಾಜಶೇಖರ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ಸಮೀಪದ ಹಸನಾಪುರದ ತಕ್ಷಶಿಲಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ತಕ್ಷ ಉತ್ಸವ-2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಗೆ ವಿದ್ಯೆಯ ಜತೆ ಸಂಸ್ಕಾರವೂ ಮುಖ್ಯ. ಪಾಲಕರಿಗೆ ಮಕ್ಕಳು ಎಷ್ಟು ಅಂಕ ಗಳಿಸುತ್ತಾರೆ ಮುಖ್ಯವಲ್ಲ ಅವರಲ್ಲಿ ಸಂಸ್ಕಾರ ಸಹ ಬಿತ್ತಬೇಕು. ನಾನು ಈ ಊರಿನ ರುದ್ರಸ್ವಾಮಿ ಮಠದ ಮೊಮ್ಮಗ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 6 ಪುರಾಣ, 8 ಕಾವ್ಯ, ನೂರಾರು ನಾಮಾವಳಿಗಳನ್ನು ಕೊಟ್ಟಂತ ಕೀರ್ತಿ ಮಠದ ಪೀಠಾಧಿಪತಿಯಾಗಿದ್ದ ಶಾಂತವೀರ ಶಿವಾಚಾರ್ಯರು ಅವರಿಗೆ ಸಲ್ಲುತ್ತದೆ. ಸಗರನಾಡಿನ ನೆಲದಲ್ಲಿ ಅದ್ಬುತ ಶಕ್ತಿ ಇದೆ. ರಂಗಂಪೇಟೆ ವಿದ್ಯಾಕಾಶಿ. ಇಲ್ಲಿಯ ಕನ್ನಡ ಸಾಹಿತ್ಯ ಸಂಘದ ನಾಡಹಬ್ಬ ಉತ್ಸವ ಪ್ರಸಿದ್ಧಿ ಪಡಿದಿದೆ. ಅನೇಕ ಕವಿಗಳು, ಸಾಹಿತಿಗಳನ್ನು ಕಂಡಂತ ವೇದಿಕೆ ಅದು. ಯನಗುಂಟಿ ದಂಪತಿಗಳು ಈ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಹುಟ್ಟು ಹಾಕಿರುವುದು ಪ್ರಶಂಸನೀಯ. ಸಂಸ್ಥೆ ಇನ್ನೂ ಹೆಮ್ಮರಾಗಿ ಬೆಳೆಯಲಿ. ತಕ್ಷಶಾಲೆಯ ಕೀರ್ತಿಯ ಪತಾಕೆ ನಾಡಿನಾದ್ಯಂತ ಹರಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ  ಮಾತನಾಡಿ ಯಾದಗರಿ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿಲ್ಲ. ಹಿಂದುಳಿದಿದ್ದು ಮನಸ್ಥಿತಿ. ಕಾರಣ ಅದರ ಬದಲಾವಣೆ ಅಗತ್ಯವಾಗಿದೆ ಎಂದು ಸಗರನಾಡು ಐತಿಹಾಸಿಕ, ಸಾಹಿತ್ಯಕವಾಗಿ, ಆರ್ಥಿಕವಾಗಿ ಗಟ್ಟಿಯಾದ ನೆಲೆ. ಇಲ್ಲಿಯವರಿಗೆ ಸಾಧಿಸುವ ಛಲ ಇದೆ. ಆದರೆ ಪ್ರದರ್ಶನ ಮಾಡಬೇಕು. ಮನೋಭೂಮಿಕೆ ಬದಲಾಯಿಸಿ ಮುನ್ನಡೆದಿದೆಯಾದರೆ ಖಂಡಿತವಾಗಿ ಯಶಸ್ಸು ಸಾಧಿಸಬಹುದು ಎಂದರು.
ಯಾದಗಿರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಮಾರು ವರ್ಷಗಳಿಂದ ಕೊನೆ ಸ್ಥಾನದಲ್ಲಿರುತ್ತಿದೆ. ಶಿಕ್ಷಕರ ಕೊರತೆ ಮಧ್ಯೆಯೂ ಇದ್ದಂತ ಶಿಕ್ಷಕರನ್ನು ಬಳಸಿಕೊಂಡು ಹೇಗೆ ಮುನ್ನಡೆಯಬೇಕು ಎಂಬುದನ್ನು ಮನವರಿಕೆ ಮಾಡಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಾವು ಎರಡು ಜಿಲ್ಲೆಗಳನ್ನು ಹಿಂದಕ್ಕಿದ್ದೇವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಶೇ.೭೦ ರಷ್ಟು ಸರಕಾರಿ ಶಾಲೆಗಳಿವೆ. ಸರಕಾರಿ ಶಾಲೆಗಳು ಹೆಚ್ಚೆಚ್ಚು ಕೆಲಸ ಮಾಡಿದಾಗ ಫಲಿತಾಂಶ ಸುಧಾರಣೆಯಾಗುತ್ತದೆ. ಅದೇ ರೀತಿ ಫಲಿತಾಂಶ ಸುಧಾರಣೆಯಲ್ಲಿ ಖಾಸಗಿ ಶಾಲೆಗಳ ಕೊಡಗೆಯು ಬೇಕಾಗುತ್ತದೆ. ಜಿಲ್ಲೆಯ ಯಾವ ಮಕ್ಕಳು ದಡ್ಡರಲ್ಲ. ಅವರಲ್ಲಿ ಸಾಮರ್ಥ್ಯವಿದೆ, ಶಕ್ತಿ ಇದೆ. ಕಾರಣ ನಾವು ಮಾನಸಿಕವಾಗಿ ಸಿದ್ಧರಾಗಬೇಕು. ದೃಷ್ಟಿ ಬದಲಾದರೆ ಸೃಷ್ಟಿ ಬದಲಾಯಿತು ಎನ್ನುವಂತೆ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ ಎಂದರು.
ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಮಾತನಾಡಿ, ನಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮಕ್ಕಳು ತಂದೆ-ತಾಯಂದಿರನ್ನು ಪ್ರೀತಿಸಬೇಕು. ಜಗತ್ತಿನಲ್ಲಿ ತಂದೆ-ತಾಯಿಯಷ್ಟು ಪ್ರೀತಿಸುವವರು ಯಾರು ಇಲ್ಲ. ಪಾಲಕರ ಕಣ್ಣಲ್ಲಿ ಎಂದೂ ನೀರು ತರಿಸಬಾರದು. ಮಾತೃ ಭಾಷೆಯನ್ನು ಪ್ರೀತಿಸಬೇಕು. ಜನ್ಮಭೂಮಿಗೆ ಋಣಿಯಾಗಿರಬೇಕು. ದೇಶವನ್ನು ಪ್ರೀತಿಸಿ, ಗೌರವಿಸಬೇಕು. ಯಾವುದೇ ಧರ್ಮ, ಜಾತಿಗೂ ಸೇರಿದರು ಸಹ ಮೊದಲು ನಾವು ಭಾರತೀಯರು ಮಾತ್ರ. ಈ ಮಾತುಗಳನ್ನು ಮಕ್ಕಳ ಬದುಕಿನಲ್ಲಿ ಗಟ್ಟಿಯಾಗಿ ನೆಲೆಯೂರಿಸಬೇಕು. ಆ ನಿಟ್ಟಿನಲ್ಲಿ ಪಾಲಕರು-ಶಿಕ್ಷಕರು ಕೈಜೋಡಿಸಬೇಕು ಎಂದರು.
ಡಿವೈಎಸ್‌ಪಿ ಜಾವೇದ್ ಇನಾಂದಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲಿಸಬೇಕು. ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ವೈ.ವರದರಾಜ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷೆ ಅಂಬಿಕಾ ಎಂ.ಯನಗುಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಕಲಿಕಾ-ಬೋಧನೆ ಇರುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ವರ್ಷ ಪ್ರತಿ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸ್ಥಾನಿಕ ರಾಜಾ ಲಕ್ಷ್ಮೀ ನಾರಾಯಣ ನಾಯಕ ಉದ್ಘಾಟಿಸಿದರು. ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಉದ್ಯಮಿ ಗ್ಯಾನಚಂದ್ ಜೈನ್, ಬಿಇಒ ಯಲ್ಲಪ್ಪ ಕಾಡ್ಲೂರ, ಪಿಐ ಉಮೇಶ್ ಎಂ.ನಾಯಕ, ಮುಖಂಡ ಮೇಲಪ್ಪ ಗುಳಗಿ ವೇದಿಕೆಯಲ್ಲಿದ್ದರು. ಡಾ.ಮುಕುಂದ ಯನಗುಂಟಿ, ಟ್ರಸ್ಟನ್ ಕಾರ್ಯದರ್ಶಿ ಗೌರಿಶಂಕರ ಯನಗುಂಟಿ ಸೇರಿ ಅನೇಕ ಪ್ರಮುಖರು ಇದ್ದರು. ಪ್ರಧಾನ ಗುರು ರಾಕೇಶ್ ನಾಯರ್ ಶಾಲೆಯ ಪ್ರಗತಿ ವರದಿ ವಾಚಿಸಿದರು. ವಾಗ್ಮಿ ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ತಕ್ಷಶಿಲಾ ಉತ್ಸವದಲ್ಲಿ ಶಾಲೆ ಮಕ್ಕಳಿಂದ ನೃತ್ಯ, ಸಂಗೀತ, ಹಾಡುಗಾರಿಕೆ ಸೇರಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಅದ್ಬುತವಾಗಿ ಮೂಡಿಬಂದು ಮನಸೊರೆಗೊಂಡವು.

Leave a Reply

Your email address will not be published. Required fields are marked *

error: Content is protected !!