ಮಾರ್ಚ್.14ರಂದು ಬೆಂಗಳೂರಲ್ಲಿ ಯುಕೆಪಿ ಐಸಿಸಿ ತುರ್ತುಸಭೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ನೀರಾವರಿ ಸಲಹಾ ಸಮಿತಿಯ (ಐಸಿಸಿ) ತುರ್ತು ಸಭೆಯನ್ನು ಮಾರ್ಚ್ 14ರಂದು (ಶುಕ್ರವಾರ) ಕರೆಯಲಾಗಿದೆ.ಯುಕೆಪಿ ಐಸಿಸಿ ಅಧ್ಯಕ್ಷರಾಗಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ 14ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ವಿಕಾಸ ಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 318ರಲ್ಲಿ ಸಭೆ ನಡೆಯಲಿದೆ. ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.ಹಿಂದಿನ ಐಸಿಸಿ ಸಭೆಯಲ್ಲಿ ಮಾರ್ಚ್ 23ರವರೆಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಮೂಲಕ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ ರೈತರು ಎಪ್ರಿಲ್ 10ರವರೆಗೂ ನೀರು ಹರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.ಹಿಂಗಾಮಿಗೆ ನೀರು ಉಳಿದಿದ್ದಲ್ಲಿ ಮತ್ತೆ ತುರ್ತು ಸಭೆ ಕರೆದು ರೈತರಿಗೆ ನೀರು ಹರಿಸಲು ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದರಂತೆ ಈಗ ತಮ್ಮ ಮನವಿಗೆ ಸ್ಪಂದಿಸಿ ಸಚಿವರು ತುರ್ತುಸಭೆ ಕರೆದಿದ್ದಾರೆ. ನೀರಾವರಿಗೆ ಮತ್ತು ಕುಡಿಯುವ ನೀರಿಗಾಗಿ ಬೇಕಾಗುವ ನೀರಿನ ಪ್ರಮಾಣ. ಲಭ್ಯತೆ ಬಗ್ಗೆ ನೀರಾವರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದ್ದು ಅದೆಲ್ಲವನ್ನೂ ತುರ್ತು ಸಭೆಯಲ್ಲಿ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ್ ತಿಳಿಸಿದ್ದಾರೆ. ಎಪ್ರಿಲ್ 10ರವರೆಗೂ ನೀರು ಒದಗಿಸುವಂತೆ ತಾವು ಮನವಿ ಮಾಡಿದ್ದು ಸಚಿವರು ಹಾಗೂ ಅಧಿಕಾರಿಗಳು ಸಕಾರಾತ್ಮಕವಾತಗಿ ಸ್ಪಂದಿಸಿದ್ದಾರೆ. ಹೀಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.


