ಜಗತ್ತು ಕಂಡ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ;ಹೆಚ್.ಎ.ಸರಕಾವಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಮ್ಮ ಅದ್ಬುತವಾದ ಕಲೆಯಿಂದ ಇಡೀ ಸಮಾಜಕ್ಕೆ ಸ್ಪೂರ್ತಿ ನೀಡಿದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಅವರು ಸದಾಕಾಲ ಸ್ಮರಣೀಯರಾಗಿದ್ದಾರೆ. ಅವರು ಜಗತ್ತು ಕಂಡ ಶ್ರೇಷ್ಠ ಶಿಲ್ಪಿ. ಅವರು ರೂಪಿಸಿದ ಅದ್ಬುತ ಕಲಾ ಕೃತಿಗಳು ಇಂದಿಗೂ ನಮ್ಮನ್ನು ಬೆರಗು ಗೊಳಿಸುತ್ತವೆ ಎಂದು ತಹಸೀಲ್ದಾರ್ ಹೆಚ್.ಎ.ಸರಕವಾಸ್ ಹೇಳಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಕರಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯ ಶಿಲ್ಪಕಲೆಗೆ ಜಕಣಾಚಾರಿ ಅವರ ಕೊಡುಗೆ ಅನನ್ಯ. ಕನ್ನಡ ಶಿಲ್ಪಕಲೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೇಲೂರು, ಹಳೆಬೀಡು, ಸೋಮನಾಥಪುರ ಸೇರಿ ಇತರೆ ಸ್ಥಳಗಳಲ್ಲಿ ಶಿಲೆಯಲ್ಲಿ ಜೀವಂತ ಕಲೆ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿ ಅವರು. ಅವರು ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದರು.
ಡಾ.ಸಂತೋಷ ಆರ್ಚಾಯ ಶಾರದಹಳ್ಳಿ ಉಪನ್ಯಾಸ ನೀಡಿ, ನಾಡಿನಾದ್ಯಂತ ದೇವಾಲಯಗಳು, ಸುಂದರ ದೇವರ ವಿಗ್ರಹಗಳನ್ನು ಕೆತ್ತಿರುವ ಶಿಲ್ಪಿ ಜಕಣಾಚಾರಿ ಎಂದೆಂದಿಗೂ ಅಮರ. ಅವರ ಸೇವೆ ಎಲ್ಲಾ ಕಾಲದಲ್ಲೂ ಅನನ್ಯ. ಅವರು ಕೆತ್ತನೆ ಮಾಡಿರುವಂತಹ ಪ್ರತಿ ವಿಗ್ರಹಗಳು ಸಹ ಇಂದಿಗೂ ಜೀವಂತಿಕೆಯಿಂದ ಇದ್ದು, ಅಂದಿನ ಕಾಲದಲ್ಲಿ ಶಿಲ್ಪಕಲೆಗೆ ಎಷ್ಟು ಒತ್ತು ನೀಡಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ಇಂದಿನ ಯುವ ಶಿಲ್ಪಿಗಳಿಗೆ ಅಮರಶಿಲ್ಪಿ ಜಕಣಾಚಾರಿ ಸ್ಪೂತಿಯಾಗಿದ್ದಾರೆ. ಮೇರು ಶಿಲ್ಪಿಗಳಾದ ಜಕಣಾಚಾರಿ ಅವರು ವಿಶ್ವಕರ್ಮ ಸಮುದಾಯದ ಹೆಮ್ಮೆಯಾಗಿದ್ದಾರೆ ಎಂದರು.
ನಂತರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಷ್ಠ ಶಿಲ್ಪಿ ಬಸಣ್ಣ ಮಾನಯ್ಯ ಹಂದ್ರಾಳ ಗೋನಾಲ ಅವರಿಗೆ ಸನ್ಮಾನಿಸಲಾಯಿತು. ಅರ್ಚಕರಾದ ಮೌನೇಶ್, ವಿಶ್ವಕರ್ಮ ಸಮಾಜದ ಮುಖಂಡರಾದ ದೇವಿಂದ್ರ ತಳವಾರಗೇರಾ, ಮಹೇಶ ಶಾರದಹಳ್ಳಿ, ಪ್ರಭು ಚನ್ನಪಟ್ಟಣ, ಮಹೇಶ್ ಸಗರ, ಶ್ರೀಕಾಂತ ಚಿಕ್ಕನಳ್ಳಿ, ಮಲ್ಲು ಬಡಿಗೇರ್, ಗಂಗಪ್ಪ ರಂಗಂಪೇಟೆ, ವಿನೋದ ಕೋನಾಳ, ಅಶೋಕ ಗೋಗಿ, ರವಿ ಐದಬಾವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

