ರೈತರ ಮತ್ತು ಗ್ರಾಹಕರ ಅನುಕೂಲಕ್ಕಾಗಿ “ಹುಣಸಗಿ ಮತ್ತು ಕೆಂಭಾವಿ” ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ; ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ರೈತರ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹುಣಸಗಿ ಮತ್ತು ಕೆಂಭಾವಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಸ್ಥಾಪಿಸಲಾಗುವುದು. ಕೆವೈಡಿಸಿಸಿ ಬ್ಯಾಂಕ್ ಬಲವರ್ಧನೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ನ ನೂತನ ಅಧ್ಯಕ್ಷ ವಿಠ್ಠಲ ಯಾದವ ಹೇಳಿದರು.
ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಸಂಘದವರು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹುಣಸಗಿ-ಕೆಂಭಾವಿಗಳಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ ಬಹುದಿನಗಳ ಬೇಡಕೆಯಾಗಿದೆ. ಕಾರಣ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಪೂರಕವಾದ ಅಂಶಗಳನ್ನು ಒದಗಿಸಿ ಅಲ್ಲಿ ಈ ಬಾರಿ ಖಂಡಿತವಾಗಿ ವ್ಯವಸ್ಥಿತ ರೀತಿಯಲ್ಲಿ ಬ್ಯಾಂಕ್ ಶಾಖೆ ಸ್ಥಾಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಹಿಂದಿನ ಆಡಳಿತ ಮಂಡಳಿಯವರು ಬ್ಯಾಂಕ್‌ನ ಸ್ಥಿತಿಯನ್ನು ಉತ್ತಮ ಹಂತದಲ್ಲಿ ತಂದಿಟ್ಟಿರುವುದು ಸಂತೋಷದ ಸಂಗತಿ. ನಾವು ಕೂಡ ಬ್ಯಾಂಕ್‌ನ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದೇವೆ. ಕಲಬುರಗಿ-ಯಾದಗಿರಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ನಾನು ಮತ್ತು ನಮ್ಮ ನಿರ್ದೇಶಕರು ಪಕ್ಷಾತೀತವಾಗಿ ಕೆಲಸ ಮಾಡಲು ಪ್ರಾಮಾಣಿಕವಾಗಿ ಪಯತ್ನ ಮಾಡುತ್ತೇವೆ. ಬ್ಯಾಂಕ್‌ನ ಸುಸ್ಥಿತಿಗೆ ಕಲಬುರಗಿ-ಯಾದಗಿರಿ ಜಿಲ್ಲೆಯ ಸಚಿವರು, ಶಾಸಕರು ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಲಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳೇ ಸಂಘದ ಆಧಾರ ಸ್ತಂಭಗಳು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ರೈತರಿಗೆ ಮತ್ತು ಗ್ರಾಹಕರಿಗೆ ಸಂಘ ಮತ್ತು ಬ್ಯಾಂಕ್‌ಗಳ ಬಗ್ಗೆ ಮನ ಮುಟ್ಟುವಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು, ಠೇವಣಿಗಳನ್ನು ಹೆಚ್ಚಿಸಬೇಕು.ಎಲ್ಲಾ ಕಡೆಗಳಲಿಯೂ ಸೊಸೈಟಿಗಳು ಕಾರ್ಯದರ್ಶಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ. ಶೀಘ್ರವೇ ತಾಲೂಕಿನ ನಿರ್ದೇಶಕರ ಜತೆಯಲ್ಲಿ ಆಯಾ ಸಂಘಗಳ ಕಾರ್ಯದರ್ಶಿಗಳ ಸಭೆ ಕರೆದು ಸಂಘದ ಸ್ಥಿತಿ-ಗತಿ, ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು. ಗುತ್ತಿಗೆದಾರ ಸಂಘದಿಂದ ಪಿಕೆಪಿಸಿಎಸ್‌ನಲ್ಲಿ ಚಾಲ್ತಿ ಖಾತೆ ತೆಗೆದು ಠೇವಣಿ ಇಡಲು ವಿನಂತಿಸಲಾಗುವುದು. ವಿವಿಧೆಡೆಯಿಂದ ಠೇವಣಿ ಹಣ ಕ್ರೂಢೀಕರಿಸಿದರೆ ಬ್ಯಾಂಕ್ ಬೆಳೆಯಲು ಸಾಧ್ಯ ಎಂದರು.
ನಿರ್ದೇಶಕ ಸುರೇಶ್ ಸಜ್ಜನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ದೋರನಹಳ್ಳಿ ರುಕ್ಮಾಪುರ ಮಾತನಾಡಿದರು. ಪ್ರಾರಂಭದಲ್ಲಿ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ್‌ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಿರ್ದೇಶಕ ಬಸನಗೌಡ ಪಾಟೀಲ್ ಚಿಂಚೋಳಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಕಾಶ ಸಜ್ಜನ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಲಿಂಗಪ್ಪ ವೆಂಕಟಗಿರಿ, ಟಿಎಪಿಸಿಎಂಎಸ್ ನಿರ್ದೇಶಕ ಬಸನಗೌಡ ಹೊಸಮನಿ (ರಾಜು ಕಾಕಾ) ವೇದಿಕೆಯಲ್ಲಿದ್ದರು. ತಾಲೂಕಿನ ಎಲ್ಲಾ ಸಹಕಾರ ಸಂಘದ ಕಾರ್ಯದರ್ಶಿಗಳು, ಸಿಬ್ಬಂದಿಗಳು ಇದ್ದರು. ಸಿಇಒಗಳಾದ ರಾಜಶೇಖರ ಯಾಳಗಿ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ ದೇಸಾಯಿ ಸೂಗೂರು ಸ್ವಾಗತಿಸಿದರು. ವಸಂತ ಕುಲಕರ್ಣಿ ಕಾಮನಟಗಿ ನಿರೂಪಿಸಿದರು. ಮಲ್ಲು ಬಾದ್ಯಾಪುರ ವಂದಿಸಿದರು.

ಖಾಯಂ ನೌಕರಿಗೆ ಸಿಎಂಗೆ ಪ್ರಸ್ತಾವನೆ
ಕೆವೈಡಿಸಿಸಿ ಬ್ಯಾಂಕ್‌ನ ಎಲ್ಲಾ ನಿರ್ದೇಶಕರ ಜತೆ ಬೆಂಗಳೂರಗೆ ನಿಯೋಗ ಹೋಗಿ ಯಾದಗಿರಿ-ಕಲಬುರಗಿ ಜಿಲ್ಲೆಯ ಮೂವರು ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಬ್ಯಾಂಗ್‌ಗೆ ಸರಕಾರದಿಂದ ಬರುವ ಸಬ್ಸಿಡಿ ಹಣ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಖಾಯಂ ಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅದೇ ರೀತಿ ಅಪೆಕ್ಸೆ ಮತ್ತು ನಬಾರ್ಡ್ ಬ್ಯಾಂಕ್‌ಗಳಿಗೆ ಭೇಟಿಯಾಗುತ್ತೇವೆ. ಸರಕಾರದ ವಿವಿಧ ಯೋಜನೆಗಳ ಹಣವನ್ನು ನಮ್ಮ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಸಂಬಂಧಿಸಿದ ಇಲಾಖೆಗಳ ಮಂತ್ರಿಗಳಿಗೆ ಕೋರಲಾಗುವುದು ಎಂದು ಅಧ್ಯಕ್ಷ ವಿಠ್ಠಲ ಯಾದವ ತಿಳಿಸಿದರು.

ಸೊಸೈಟಿಗಳ ಕಾರ್ಯದರ್ಶಿಗಳ ಹಲವಾರು ಸಮಸ್ಯೆಗಳ ಮಧ್ಯೆ ಇಂದು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಅನನ್ಯ. ಅವರನ್ನು ಖಾಯಂ ಗೊಳಿಸಲು ಈ ಹಿಂದೆ ಪ್ರಯತ್ನಿಸಲಾಗಿತ್ತು. ಅವರ ಹುದ್ದೆ ಖಾಯಂ ಗೊಳಿಸುವುದರಿಂದ ಸರಕಾರಕ್ಕೆ ಹೊರೆಯಾಗುವುದಿಲ್ಲ. ಈಗ ಸರಕಾರಕ್ಕೆ ಮತ್ತೊಮ್ಮೆ ಮನವರಿಕೆ ಮಾಡಿ ಖಾಯಂ ಗೊಳಿಸಲು ಸಹಕರಿಸಬೇಕಾಗಿದೆ ಎಂದು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕರು ಡಾ‌.ಸುರೇಶ ಸಜ್ಜನ್ ಹೇಳಿದರು.

ಫೋಟೊ : ಸುರಪುರದಲ್ಲಿ ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಮತ್ತು ನಿರ್ದೇಶಕರಾದ ಸುರೇಶ ಸಜ್ಜನ್, ಬಸನಗೌಡ ಪಾಟೀಲ್ ಚಿಂಚೋಳಿಗೆ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!