ಶತಮಾನದ ಸಂತ, ಭಕ್ತರ ಪ್ರೀತಿಯ ‘ಅಪ್ಪಾವ್ರು’ ಸಿದ್ದೇಶ್ವರ ಶ್ರೀ; ಡಾ.ಸುರೇಶ ಸಜ್ಜನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಪ್ರವಚನ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತರೆನಿಸಿಕೊಂಡ, ನಡೆದಾಡುವ ದೇವರು , ಸರಳತೆಯ ಸಾಕಾರಮೂರ್ತಿ, ನುಡಿದಂತೆ ನಡೆದ ಶರಣರು ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ ಎಂದು ತಾಲೂಕು ವೀರಶೈವ-ಲಿಂಗಾಯತ ಸಮಾಜದ ಅಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.
ಇಲ್ಲಿಯ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶ್ರೀಗಳ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆದ ಜ್ಞಾನಯೋಗಿಗಳು, ಮಹಾನ್ ಸಂತರು. ಬದುಕಿನ ಎಲ್ಲ ಅಯಾಮಗಳ ಜ್ಞಾನದ ಮೇರು ಪರ್ವತವಾಗಿದ್ದರು. ಅವರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದರು.
ಸಿದ್ದೇಶ್ವರ ಸ್ವಾಮೀಜಿಯವರು ಸತ್ಯದ ಅರಿವು ಮೂಡಿಸುವುದರ ಜತೆಗೆ ಜ್ಞಾನದ ಬೆಳಕು ತೋರಿಸಿ ಎಲ್ಲರ ಬದುಕಿಗೆ ದಿವ್ಯ ಚೇತನರಾಗಿದ್ದಾರೆ. ಜನರಿಗೆ ಅರ್ಥವಾಗುವ ಶೈಲಿಯಲ್ಲಿ ಸರಳೀಕರಿಸಿ ಪ್ರವಚನ ಹೇಳುತ್ತಾ, ಬದುಕುವ ರೀತಿ ತಿಳಿಸಿದ್ದಾರೆ. ಶ್ರೀಗಳ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಮಹಾನ್ ಚೇತನ ಸಿದ್ದೇಶ್ವರ ಶ್ರೀಗಳ ಚಿಂತನೆಗಳು ಅಜರಾಮರ ಎಂದರು.
ಸಾನ್ನಿಧ್ಯ ವಹಿಸಿದ್ದ ಮಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು, ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗತ್ ಪ್ರಸಿದ್ಧರಾಗಿದ್ದರು ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು. ಅತ್ಯಂತ ಸರಳ ಬದುಕನ್ನು ನಡೆಸುವ ಮೂಲಕ ಜಗತ್ತಿಗೆ ಸರಳತೆಯ ಪಾಠ ಮಾಡಿದ ಮಾಹತ್ಮರು ಎಂದರು.
ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಸಮಾಜದ ಮುಖಂಡರಾದ ಬಸವರಾಜ ಜಮದ್ರಖಾನಿ, ದೊಡ್ಡಪ್ಪ ನಿಷ್ಠಿ, ಚಂದ್ರಕಾಂತ ಕಳ್ಳಿಮನಿ, ಶರಣಯ್ಯಸ್ವಾಮಿ ಮಠಪತಿ, ವಿರೇಶ ಪಂಚಾಂಗ ಮಠ, ಸಂಗನಗೌಡ ಪಾಟೀಲ್, ಶರಣಬಸವ ಯಳವಾರ, ವೀರೇಶ ನಿಷ್ಠಿ ದೇಶಮುಖ, ಮಲ್ಲಿಕಾರ್ಜುನ ಜಾಲಹಳ್ಳಿ, ಸುಗೂರೇಶ ವಾರದ, ಪ್ರಕಾಶ ಅಂಗಡಿ, ಬಸವರಾಜ ಬೂದಿಹಾಳ. ಮಹೇಶ ಕೋನಾಳ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪಮಠ, ಚನ್ನಬಸಯ್ಯಸ್ವಾಮಿ ಜೆಟಗಿಮಠ, ಶಿವರಾಜ್ ಕಲಕೇರಿ, ಮಹೇಶ ಹಳ್ಳದ, ಹೆಚ್.ಡಿ.ರಾಠೋಡ್, ಡಾ.ಶರಣಬಸವ ಹೂಗಾರ, ಮಂಜುನಾಥ ಗಚ್ಚಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

