ಲೈಬ್ರರಿ, ಉದ್ಯಾನ ವನಕ್ಕೆ ಭೂಮಿ ಮಂಜೂರು ಮಾಡಲು ಆಗ್ರಹಿಸಿ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ಸುರಪುರ ಶಾಂತಿಯುತ, ಯಶಸ್ವಿ ಬಂದ್

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಶ್ರೀ ಮಹರ್ಷಿ ವಾಲ್ಮೀಕಿ ಲೈಬ್ರರಿಗೆ ಮತ್ತು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಉದ್ಯಾನ ವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಸೋಮವಾರ ಕರೆ ನೀಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು.
ಬಂದ್ ಪ್ರಯುಕ್ತ ವ್ಯಾಪಾರಿಗಳು ಬೆಳಗ್ಗೆಯಿಂದಲೇ ಅಂಗಡಿ-ಮುಗಟ್ಟುಗಳನ್ನು ಮುಚ್ಚಿದ್ದರು. ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು, ಶಾಲಾ, ಕಾಲೇಜುಗಳು ಎಂದಿನಂತೆ ನಡೆದಿದ್ದವು. ಬಸ್ ಸಂಚಾರ ಹಿಂಪಡೆಯಲಾಗಿತ್ತು. ಕೇಂದ್ರ ಬಸ್ ನಿಲ್ದಾಣ ಬಣಗುಡುತ್ತಿತ್ತು. ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿತು. ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ಪ್ರತಿಭಟನಾಕಾರರು ಮೊದಲಿಗೆ ಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಹಸನಾಪುರ ವೃತ್ತದಲ್ಲಿ ಹೋರಾಟ ಪ್ರಾರಂಭಿಸಿ ಬೆಂಗಳೂರು-ಬೀದರ್ ರಾಜ್ಯ ಹೆದ್ದಾರಿ ಸಂಚಾರ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಹೋರಾಟ ಮುಂದುವರೆಸಿದರು.
ನಂತರ ಪ್ರತಿಭಟನಾ ನಿರತ ಮುಖಂಡರು ಮಾತನಾಡಿ, ವಾಲ್ಮೀಕಿ ಸಮುದಾಯ ತಾಲೂಕಿನಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದು ಯಾವುದೇ ತರಹದ ಸಮುದಾಯ ಭವನ, ಗ್ರಂಥಾಲಯ ಹೊಂದಿರುವುದಿಲ್ಲ. ಇವುಗಳ ನಿರ್ಮಾಣಕ್ಕಾಗಿ ನಗರದ ಶ್ರೀ ಪ್ರಭು ಕಾಲೇಜು ಮೈದಾನದ ಸರ್ವೆ ನಂ.7/1 ರಲ್ಲಿ ಖಾರೀಜ್ ಖಾತಾ ವಿಸ್ತೀರ್ಣ 6 ಎಕರೆ 15 ಗುಂಟೆ ಜಮೀನು ಪೈಕಿ 4 ಎಕರೆ ಜಮೀನು ಮಂಜೂರು ಮಾಡಿ ಶ್ರೀ ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಮತ್ತು ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಉದ್ಯಾನ ವನ ನಿರ್ಮಿಸಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಸದರಿ ಸರ್ವೆ ನಂಬರದ ಆಸ್ತಿಯು ಸುರಪುರ ಸಂಸ್ಥಾನದ ಆಸ್ತಿಯಾಗಿದೆ. ಸಂಸ್ಥಾನದ ಅರಸರು ಹೈಕಶಿ ಸಂಸ್ಥೆಯವರಿಗೆ ಆಟದ ಮೈದಾನ ಮಾಡಿಕೊಂಡು ಬಳಕೆ ಮಾಡಿಕೊಳ್ಳುವುದಕ್ಕೆ ನೀಡಿರುತ್ತಾರೆ ಹೊರತು ಬೇರೆಯವರು ಕಬ್ಜೆ ಮಾಡಿ ತಮ್ಮದೇ ಹಕ್ಕು ಪಡೆದುಕೊಳ್ಳುವುದಕ್ಕೆ ಇರುವುದಿಲ್ಲ. ಸದರಿ ಜಮೀನು ಸುಮಾರು 45 ವರ್ಷಗಳಿಂದ ನಮ್ಮ ಕಬ್ಜೆದಲ್ಲಿರುತ್ತದೆ. ಸಂವಿಧಾನದ 342 ಆರ್ಟಿಕಲ್ ಪ್ರಕಾರ ಪರಿಶಿಷ್ಟ ಪಂಗಡದವರು ಕಬ್ಜೆ ಮಾಡಿರುವ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಕಾರಣ ಜಮೀನು ಮಂಜೂರಿ ಮಾಡಿ ಆದೇಶಿಸಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಗಾಂಧೀಜಿ ವೃತ್ತದಲ್ಲಿ ನ್ಯಾಯ ಸಿಗುವವರೆಗೂ ನಿರಂತರ ಧರಣಿ ಆಯೋಜಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಸ್ ನಿಲ್ದಾಣದ ಸಮೀಪ ಟೆಂಟ್ ಹಾಕಿ ಪ್ರತಿಭಟನೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಕೂಡಲೇ ಟೆಂಟ್ ತೆರವು ಗೊಳಿಸಬೇಕು. ಇಲ್ಲವಾದಲ್ಲಿ ನಾವು ಗಾಂಧೀಜಿ ವೃತ್ತದಲ್ಲಿ ಟೆಂಟ್ ಹಾಕಿ ಧರಣಿ ನಡೆಸಬೇಕಾಗುತ್ತದೆ ಎಂದು ಗಡುವು ನೀಡಿದರು. ಈ ಕುರಿತು ಕ್ರಮ ತಿಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಮತ್ತು ಮನವಿ ಪತ್ರ ಸಹ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್ ಅವರು ಅದರ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ತಹಸೀಲ್ದಾರ್ ಹೆಚ್.ಎ.ಸರಕಾವಸ್, ಡಿವೈಎಸ್‌ಪಿ ಜಾವೇದ್ ಇನಾಮದಾರ್, ಪಿಐ ಉಮೇಶ್ ಎಂ.ನಾಯಕ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು. ನಗರದಲ್ಲಿ ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಹೋರಾಟದಲ್ಲಿ ಭಾಗವಹಿಸಿದ ಪ್ರಮುಖರು
ಗೊಲ್ಲಪಲ್ಲಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠದ ಪೂಜ್ಯರಾದ ವರದಾನೇಶ್ವರ ಸ್ವಾಮೀಜಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪ ಗೌಡ ಆಲ್ದಾಳ, ಸುರಪುರ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ, ಉಪಾಧ್ಯಕ್ಷ ಭೀಮು ಹೆಚ್.ನಾಯಕ, ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯಕ ಪ್ಯಾಪ್ಲಿ, ಹನುಮಗೌಡ, ಯಲ್ಲಪ್ಪ ಕಲ್ಲೊಡಿ, ಮಲ್ಲನಗೌಡ ಗೋಡಿಹಾಳ, ಸಂಜೀವ ನಾಯಕ, ಪರಮಣ್ಣ ವಡಕೇರಿ, ರಂಗನಾಥ ಲಕ್ಷ್ಮೀಪುರ, ಪರಶುರಾಮ ನಾಯಕ ದೇವಾಪುರ, ದೇವು ನಾಯಕ ಚಾಲಿಬೆಂಚಿ, ಮೌನೇಶ ನಾಯಕ ಪತ್ತೆಪೂರ, ವಿಜಯಗೌಡ ಬೇವಿನಾಳ, ವೆಂಕಟೇಶ ನಾಯಕ ಪರಸನಹಳ್ಳಿ, ವಿಜಯಕುಮಾರ ಚಿಟ್ಟಿ, ಮುಖಂಡರಾದ ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ವಿನಯ ನಾಯಕ ಕರಡಕಲ್, ವೆಂಕಟೇಶ ನಾಯಕ ಬೈರಿಮಡ್ಡಿ, ರಾಮು ನಾಯಕ ಅರಳಹಳ್ಳಿ, ಶಿವಮೋನಯ್ಯ ಎಲ್‌ಡಿ ನಾಯಕ, ಹಣಮಂತ ಬೊಮನಳ್ಳಿ, ಉಸ್ತಾದ್ ವಜಾಹತ್ ಹುಸೇನ್, ಶಿವರಾಜ್ ಪಾಟೀಲ್, ವಾಲ್ಮೀಕಿ ನಾಯಕ, ವಾಸುದೇವ ನಾಯಕ, ದೇವು ನಾಯಕ, ಅಶೋಕ ಕವಲಿ, ಅಪ್ಪಾರಾವ್ ನಾಯಕ, ಬಲಭೀಮ ನಾಯಕ ದೇವಾಪುರ, ಭೀಮನಗೌಡ ಅಮ್ಮಾಪುರ, ರವಿ ನಾಯಕ ಬೈರಿಮಡ್ಡಿ, ಕನಕಾಚಲ ನಾಯಕ, ಗೋವಿಂದರಾಜ ನಾಯಕ ಸೇರಿ ಸಮಾಜದ ಅನೇಕರಿದ್ದರು.

ಫೋಟೊ : ಸುರಪುರದ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದವರು ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಹಸನಾಪುರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬೆಂಗಳೂರು-ಬೀದರ್ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಲಾಯಿತು
ಹಸನಾಪುರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬೆಂಗಳೂರು-ಬೀದರ್ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಲಾಯಿತು

Leave a Reply

Your email address will not be published. Required fields are marked *

error: Content is protected !!