ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸಿ; ಶಾಸಕ ಆರ್‌ವಿಎನ್


ಸುರಪುರ ಟೈಮ್ಸ್ ವಾರ್ತೆ

ಸುರಪುರ : ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸೂಚನೆ ನೀಡಿದರು.
ತಾಲೂಕಿನ ಕೋನಾಳ ಗ್ರಾಮದಲ್ಲಿ ಬುಧವಾರ ಕೋನಾಳ ಗ್ರಾಮದಿಂದ ಬಾಚಿಮಟ್ಟಿ ಗ್ರಾಮದ ವರೆಗೆ 1 ಕೋಟಿ ರೂಪಾಯಿ ವೆಚ್ಚದಲ್ಲಿ 1 ಕಿಮೀ ಡಾಂಬರೀಕರಣ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮರ್ಪಕ ಕಾಮಗಾರಿಗೆ ಗಮನಹರಿಸಬೇಕು. ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಮಾಡಿ ಮುಗಿಸಲು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಕ್ಷೇತ್ರದಲ್ಲಿ ನಗರ ಸೇರಿ ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಹೋಗುವ ರಸ್ತೆಗಳು ಉತ್ತಮವಾಗಿರಬೇಕು ಎಂಬುದು ನನ್ನ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಿ, ಆಯಾ ಕಾಮಗಾರಿಗಳಿಗೆ ಅನುದಾನ ಸಹ ಒದಗಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ರಸ್ತೆ ಕಾಮಗಾರಿಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ ಕಕ್ಕೇರಾ, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ದೊಡ್ಡ ದೇಸಾಯಿ ದೇವರಗೋನಾಲ, ಭೀಮನಗೌಡ ಲಕ್ಷ್ಮೀ ಹೆಮನೂರ ಸೇರಿದಂತೆ ಕೋನಾಳ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫೋಟೊ : ಸುರಪುರ ತಾಲೂಕಿನ ಕೋನಾಳ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೂಮಿ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!