ಸಂಭ್ರಮ ಶನಿವಾರ : ರಸ್ತೆ ಸುರಕ್ಷತಾ ನಿಯಮಗಳ ಕುರಿತು ಶೆಳ್ಳಿಗಿ ಶಾಲಾ ಮಕ್ಕಳಿಗೆ ಜಾಗೃತಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ :ತಾಲೂಕಿನ ಶೆಳ್ಳಿಗಿ ಗ್ರಾಮದ ಶಾಲಾ ಆವರಣದಲ್ಲಿ ಇಂದು ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ಮೌಲ್ಯಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ಬ್ಯಾಗ್ ರಹಿತ “ಸಂಭ್ರಮ ಶನಿವಾರ” ಕಾರ್ಯಕ್ರಮದ ಅಂಗವಾಗಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಭವಿಷ್ಯದ ನಾಗರಿಕರಾದ ಮಕ್ಕಳಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಕ ಶರಣಬಸವ ದೇವರಗೋನಾಲ ಮಾತನಾಡಿ ವ್ಯಕ್ತಿಗಳು, ರಸ್ತೆ ದಾಟುವಾಗ ಜೆಬ್ರಾ ಕ್ರಾಸಿಂಗ್ ಬಳಕೆ, ಸಂಚಾರ ಸಿಗ್ನಲ್‌ಗಳ ಪಾಲನೆ, ಆಟವಾಡುವಾಗ ರಸ್ತೆ ಬಳಿಯಲ್ಲಿ ಎಚ್ಚರಿಕೆ ವಹಿಸುವ ಅಗತ್ಯದ ಕುರಿತು ವಿವರಿಸಿದರು. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಧರಿಸುವ ಮಹತ್ವ, ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಕಡ್ಡಾಯ ಎಂಬುದನ್ನು ಮಕ್ಕಳಿಗೆ ಸರಳವಾಗಿ ತಿಳಿಸಲಾಯಿತು.
ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಸಂಭವಿಸುವ ಅಪಘಾತಗಳ ಪರಿಣಾಮಗಳನ್ನು ಉದಾಹರಣೆಗಳ ಮೂಲಕ ವಿವರಿಸಿ, ಇಂತಹ ತಪ್ಪುಗಳಿಂದ ದೂರ ಇರಬೇಕು ಎಂದು ಮಕ್ಕಳಿಗೆ ಸಲಹೆ ನೀಡಲಾಯಿತು. ಅಲ್ಲದೆ, ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಅಪಾಯಕಾರಿ ಎಂಬುದರ ಕುರಿತು ಸಹ ಮಾಹಿತಿ ನೀಡಲಾಯಿತು.
“ರಸ್ತೆ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ. ನಿಯಮ ಪಾಲನೆ ಮಾಡಿದರೆ ಅಪಘಾತಗಳಿಗೆ ತಡೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮಕ್ಕೆ ಸಮಾರೋಪವಾಯಿತು. ಈ ಸಂದರ್ಭ ಶಾಲಾ ಶಿಕ್ಷಕರಾದ, ಸುರೇಶ,ಗುರುರಾಜ,ಸರ್ಪಭೂಷಣ,ಆಕಾಶ, ಮೌನೇಶ.ಸಾವಿತ್ರಿ ಹಳ್ಳದ,ರೂಪಾದೇವಿ,ಐಶ್ವರ್ಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.


