ಶಿಕ್ಷಕ ಚಿನ್ನುಮಿಯಾ ಪಟೇಲ್ ರವರಿಗೆ ಪ್ರಶಸ್ತಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಇಲ್ಲಿಯ ಸರ್ವೋದಯ ಶಿಕ್ಷಣ ಸಂಸ್ಥೆಯ ಶಿಕ್ಷಕ ಚಿನ್ನುಮಿಯಾ ಪಟೇಲ್ ಕರ್ನಾಟಕ ಪ್ರೆಸ್ ಕ್ಲಬ್ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಜ್ಞಾನ ಭಾರತೀಯ ಎನ್ ಜಿಇಎಫ್ ಲೇ ಔಟ್ ಕಲಾ ಗ್ರಾಮದಲ್ಲಿ ಜರುಗಿದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಶಿಕ್ಷಕ ಚಿನ್ನುಮಿಯಾ ಪಟೇಲ್ ರವರಿಗೆ ಗಣನೀಯ ಸಾಧನೆಗಾಗಿ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿ, ಶಿಸ್ತುಬದ್ಧ ಬೋಧನೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಶಿಕ್ಷಕ ಚಿನ್ನುಮಿಯಾ ಪಟೇಲ್ ರವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಸೇವೆ ಇತರ ಶಿಕ್ಷಕರಿಗೂ ಪ್ರೇರಣೆಯಾಗಿದೆ” ಎಂದು ಪ್ರಶಂಸಿಸಿದರು.
ನಂತರ ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯಾಧ್ಯಕ್ಷ ಎಸ್‌.ರಾಮಸ್ವಾಮಿ ಮಾತನಾಡಿ, ಕರ್ನಾಟಕ ಪ್ರೆಸ್ ಕ್ಲಬ್, ಪ್ರತಿ ವರ್ಷ ಸಾಧಕರನ್ನು ಗುರುತಿಸಿ, ಸನ್ಮಾನಿಸಿ ಈ ನಾಡಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಭಾರತ ಸೇವಾ ರತ್ನ ಪ್ರಶಸ್ತಿಯೂ ಸಾಧಕರ ಸಾಧನೆಗೆ ಹಿಡಿದ ಕನ್ನಡಿ ಆಗಿದೆ. ಪ್ರಶಸ್ತಿಗಳು ಯೋಗ್ಯ ಸಾಧಕರಿಗೆ ದೊರೆತಾಗ ಪ್ರಶಸ್ತಿ ಮೌಲ್ಯಗಳು ಹೆಚ್ಚಾಗುತ್ತವೆ ಮತ್ತು ಪ್ರಶಸ್ತಿ ಸ್ವೀಕರಿಸುವವರ ಜವಾಬ್ದಾರಿ ಸಹ ಹೆಚ್ಚಾಗಿ, ಸಾಧನೆಗೆ ಹುಮ್ಮಸ್ಸು, ಇನ್ನಷ್ಟು ಸಾಧಿಸುವ ಛಲ ಹೆಚ್ಚಾಗುತ್ತದೆ ಎಂದರು. ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ರಾಜ್ಯಾಧ್ಯಕ್ಷ ಪಿ.ಕೃಷ್ಣಗೌಡ, ಕರ್ನಾಟಕ ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್‌ಜಿ ಸೇರಿ ಗಣ್ಯರು, ಮುಖಂಡರು ಮತ್ತು ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!