ಎರಡನೇ ಬೆಳೆಗೆ ನೀರು ಒದಗಿಸಲು ರಾಜ್ಯ ರೈತ ಸಂಘ ಹಸಿರು ಸೇನೆ ಆಗ್ರಹ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ ಬೇಸಿಗೆ ಬೆಳೆಗೆ ಏ.15 ರವರೆಗೆ ನೀರು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಮುಖಂಡರು ಆಗ್ರಹಿಸಿದರು.
ಇಲ್ಲಿಯ ಟೇಲರ್ ಮಂಜಿಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾ ಗಿರುವುದರಿಂದ ಬಸವಸಾಗರ ಜಲಾಶಯದಲ್ಲಿ ನೀರು ಸಂಗ್ರಹವಿದೆ. ರೈತರು ಹಿಂಗಾರು ಬೆಳೆ ಬೆಳೆಯುವಷ್ಟು ಡ್ಯಾಂನಲ್ಲಿ ನೀರು ಇರುವುದರಿಂದ ತುಂಬಾ ಸಂತೋಷದಲ್ಲಿ ತಮ್ಮ ಜಮೀನುಗಳಲ್ಲಿ 255 ಬಿತ್ತನೆ ಮಾಡಿರುತ್ತಾರೆ. ಆದರೆ ಮೊನ್ನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಾರಬಂದಿ ಪದ್ಧತಿ ಅನುಸರಿಸಿ ಏ.6 ರವರೆಗೆ ಕಾಲುವೆ ನೀರು ಹರಿಸಲಾ ಗುವುದು ಎಂದು ತಿಳಿಸಿರುವುದು ಅವೈಜ್ಞಾನಿಕವಾಗಿದೆ ಆರೋಪಿಸಿದರು. ಮಾ.23 ರಿಂದ ಮಾ.31 ರವರೆಗೆ ನೀರು ಬಂದ್ ಮಾಡಿ ಏ.1 ರಿಂದ ಏ.6 ರವರೆಗೆ ನೀರು ಬಿಡುವುದಾಗಿ ತಿಳಿಸಲಾಗಿದೆ. ಆದರೆ ಈ ಪದ್ದತಿಯಿಂದ ರೈತರು ಬಿತ್ತನೆ ಮಾಡಿದ ಒಂದು ಬೆಳೆಯು ಉಳಿಯುವುದಿಲ್ಲ. ಬೇಸಿಗೆ ಬಿಸಿಲಿಗೆ ನೀರಿಲ್ಲದೆ ಬೆಳೆ ಒಣಗಿ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು. ಹಿಂಗಾರು ಬಿತ್ತನೆ ಮಾಡಿದ ಬೆಳೆಗಳಿಗೆ ವಾರಬಂದಿ ಮಾಡದೆ ನಿರಂತರವಾಗಿ 2.15 ರವರೆಗೆ ನೀರು ಬಿಟ್ಟರೆ ಮಾತ್ರ ರೈತರು ಬೆಳೆಗಳು ಕೈಗೆ ಸೇರುತ್ತವೆ. ಈಗಾಗಲೇ ಸರಕಾರಕ್ಕೆ 2-3 ಬಾರಿ ನಮ್ಮ ಸಂಘಟನೆ ವತಿಯಿಂದ ಮನವಿ ಪತ್ರ ಕೊಟ್ಟೂರು ಯಾವುದೇ ಕ್ರಮ ಜರುಗಿಸದೆ ತಮ್ಮ ಇಚ್ಚೆಯಿಂದ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ ಎಂದು ದೂರಿದರು. ಒಂದು ವೇಳೆ ನೀರು ಬಿಡದೆ ಹೋದಲ್ಲಿ ಮುಂದೆ ರೈತರಿಗೆ ಆಗುವ ಹಾನಿಗೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ. ರೈತರು ಈ ಬೆಳೆಗಳಿಗೆ ಮಾಡಿದ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಕಾರಣ ಏ.15 ರವರೆಗೆ ವಾರಬಂದಿ ಮಾಡದೆ ನಿರಂತರವಾಗಿ ಕಾಲುವೆಗೆ ನೀರು ಹರಿಸಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದೆ ಹೋದಲ್ಲಿ ಜಿಲ್ಲಾ ಸಮಿತಿ ವತಿಯಿಂದ ನಾರಾಯಣಪುರದ ಮುಖ್ಯ ಎಂಜನಿಯರ್ ಕಚೇರಿಗೆ ಬೀಗ ಹಾಕಿ ನ್ಯಾಯ ಸಿಗುವವರೆಗೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ, ಉಪಾಧ್ಯಕ್ಷ ಹಣಮಂತ್ರಾಯ ಚಂದಲಾಪುರ ಸೇರಿದಂತೆ ಸಂಘದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!