ಎರಡನೇಯ ಬೆಳೆಗೆ ಏ.೧೦ ರವರೆಗೆ ನಿರಂತರ ನೀರು ಹರಿಸಲು ರೈತ ಸಂಘದ ಸಾಮೂಹಿಕ ಸಂಘಟನೆಗಳ ವೇದಿಕೆ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡದಂಡೆ ಕಾಲುವೆ ಮೂಲಕ ಬೇಸಿಗೆ ಬೆಳೆಗಳಿಗೆ ಏ.೧೦ ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಾಮೂಹಿಕ ಸಂಘಟನೆಗಳ ವೇದಿಕೆ ಮುಖಂಡರು ಆಗ್ರಹಿಸಿದರು.
ಇಲ್ಲಿಯ ಪ್ರವಾಸಿ ಮಂದಿರ ಟೇರ‍್ಸ್ ಮಂಜಿಲ್‌ನಲ್ಲಿ ಸೋಮವಾರ ಜರುಗಿದ ರೈತ ಸಂಘದ ಸಾಮೂಹಿಕ ಸಂಘಟನೆಗಳ ವೇದಿಕೆ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಮುಖಂಡರು, ಮಾ.೨೩ ರಿಂದ ಮಾ.೩೧ ರವರೆಗೆ ನೀರು ಬಂದ್ ಮಾಡಿ ಏ.೧ ರಿಂದ ಏ.೬ ರವರೆಗೆ ನೀರು ಬಿಡುವುದಾಗಿ ತಿಳಿಸಲಾಗಿದೆ. ಆದರೆ ಈ ಪದ್ದತಿಯಿಂದ ರೈತರು ಬಿತ್ತನೆ ಮಾಡಿದ ಒಂದು ಬೆಳೆಯು ಉಳಿಯುವುದಿಲ್ಲ ಎಂದು ಹೇಳಿದರು.
ಬೇಸಿಗೆ ಬಿಸಿಲಿಗೆ ನೀರಿಲ್ಲದೆ ಬೆಳೆ ಒಣಗಿ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಬರುತ್ತದೆ. ಹಿಂಗಾರು ಬಿತ್ತನೆ ಮಾಡಿದ ಬೆಳೆಗಳಿಗೆ ವಾರಬಂದಿ ಮಾಡದೆ ನಿರಂತರವಾಗಿ ಏ.೧೦ ರವರೆಗೆ ನೀರು ಬಿಟ್ಟರೆ ಮಾತ್ರ ರೈತರು ಬೆಳೆಗಳು ಕೈಗೆ ಸೇರುತ್ತವೆ. ಕಾರಣ ಏ.೧೦ ರವರೆಗೆ ವಾರಬಂದಿ ಮಾಡದೆ ನಿರಂತರವಾಗಿ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ನಾರಾಯಣಪುರ ಮುಖ್ಯ ಎಂಜನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮತ್ತೊಮ್ಮೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಈ ಕುರಿತಂತೆ ಒತ್ತಾಯಿಸಬೇಕು ಎಂದು ಕೋರಿದರು. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ, ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳಮಠ, ವಾಸುದೇವ ಮೇಟಿ ಕರ್ನಾಟಕ ರಾಜ್ಯ ರೈತ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ಕರ್ನಾಟಕ ರಾಜ್ಯ ರೈತ ಸಂಘ ಬಡಗಲಾಪೂರ ನಾಗೇಂದ್ರ ಬಣದ ಜಿಲ್ಲಾ ಕಾರ್ಯದರ್ಶಿ ಬುಚ್ಚಪ್ಪ ನಾಯಕ, ತಾಲೂಕು ಗೌರವಾಧ್ಯಕ್ಷ ಸಿದ್ದಪ್ಪ ಗುಡ್ಡಕಾಯಿ, ಕಾರ್ಯದರ್ಶಿ ಮಲ್ಲಣ್ಣ ಹುಬ್ಬಳ್ಳಿ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಎಪಿಎಂಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹುಕಾರ, ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗೂರಿ ಸೇರಿ ಅನೇಕ ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.

