77ನೇ ಗಣರಾಜ್ಯೋತ್ಸವ: ಸುರಪುರ ಬಿಜೆಪಿ ಕಚೇರಿಯಲ್ಲಿ ರಾಜಾ ಹನಮಪ್ಪ ನಾಯಕ (ತಾತಾ)ರಿಂದ ಧ್ವಜಾರೋಹಣ
ಸುರಪುರ ಟೈಮ್ಸ್ ವಾರ್ತೆ
ಸುರಪುರ;77ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಇಂದು ಸುರಪುರ ತಾಲೂಕಿನ ಮಾಜಿ ಸಚಿವರ ಕಾರ್ಯಾಲಯದಲ್ಲಿ ಭವ್ಯ ಗಣರಾಜ್ಯೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದ ಅಂಗವಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಿರಿಯ ಬಿಜೆಪಿ ಮುಖಂಡ ಶ್ರೀ ರಾಜಾ ಹನಮಪ್ಪ ನಾಯಕ(ತಾತಾ)ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಭಕ್ತಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಮಹತ್ವವನ್ನು ಗಂಭೀರವಾಗಿ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ದಿಟ್ಟವಾಗಿ ಸಾಗುತ್ತಿದ್ದು, ರಾಷ್ಟ್ರದ ಏಕತೆ–ಅಖಂಡತೆಯನ್ನು ಬಲಪಡಿಸುವ ಕೆಲಸ ಬಿಜೆಪಿ ಸರ್ಕಾರದಿಂದ ಆಗುತ್ತಿದೆ ಎಂದು ಹೇಳಿದರು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಸುವುದು ಬಿಜೆಪಿ ಪಕ್ಷದ ಮೂಲ ತತ್ವವಾಗಿದ್ದು, ರಾಷ್ಟ್ರಹಿತವೇ ಪಕ್ಷದ ಮೊದಲ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಅನೇಕ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ದೇಶಭಕ್ತಿಗೀತೆಗಳೊಂದಿಗೆ ಕಾರ್ಯಕ್ರಮವು ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.






