ಸುರಪುರ ತಾಲೂಕ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಂಭಾವಿಯಲ್ಲಿ ಆಯೋಜನೆ; ಶರಣಬಸಪ್ಪ ಯಾಳವಾರ


ಸುರಪುರ ಟೈಮ್ಸ್ ವಾರ್ತೆ

ಸುರಪುರ; ತಾಲೂಕದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2026ರ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಕೆಂಭಾವಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸುರಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ.ಕ.ಸಾ.ಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ದಿನಾಂಕವನ್ನು ನಿಗಧಿಪಡಿಸುವ ಕುರಿತು ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚಿಸಲಾಗುವುದೆಂದರು. ಜೊತೆಗೆ ಸಮ್ಮೇಳನದ ಯಶಸ್ವಿ ಆಯೋಜನೆಗಾಗಿ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು. ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಗ್ರಂಥವನ್ನು ಪ್ರಕಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಾ ಮುಕುಂದ ನಾಯಕ, ಸಾಹಿತಿಗಳು, ಹಿರಿಯರು ಹಾಗೂ ಕನ್ನಡದ ಮನಸ್ಸುಗಳನ್ನು ಒಂದೆಡೆ ಸೇರಿಸಿಕೊಂಡು ವಿಜೃಂಭಣೆಯಿಂದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕೆಂಭಾವಿ ವಲಯ ಘಟಕದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ನಿರೂಪಣೆಯನ್ನು ಗೌರವ ಕಾರ್ಯದರ್ಶಿ ಹೆಚ್. ವೈ. ರಾಠೋಡ ವಹಿಸಿಕೊಂಡಿದ್ದು, ದೇವು ಹೆಬ್ಬಾಳ ಸ್ವಾಗತಿಸಿ, ಗೌರವ ಕೋಶಾಧ್ಯಕ್ಷ ವೆಂಕಟೇಶ ಪಾಟೀಲ ವಂದಿಸಿದರು.
ಸಭೆಯಲ್ಲಿ ಪ್ರಕಾಶ ಅಲಬನೂರ, ಮಹೇಶ ಜಹಗೀರದಾರ, ಶ್ರೀಶೈಲ ಯಂಕಂಚಿ, ಶ್ರೀನಿವಾಸ ಜಾಲವಾದಿ, ಶಿವನಗೌಡ ಪಾಟೀಲ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪನವರಮಠ, ಯಲ್ಲಪ್ಪ ಹುಲಿಕಲ್, ಗಂಗಾಧರ ರುಮಾಲ, ಶಾಂತಪ್ಪ ಬೂದಿಹಾಳ, ಬಸವರಾಜ ಜಮದ್ರಖಾನಿ, ಗುಂಡಭಟ್ ಜೋಶಿ, ನಬೀಲಾಲ ಮಕಾನ್ದಾರ, ಮಲ್ಲು ಬಾದ್ಯಾಪುರ, ರಾಘವೇಂದ್ರ ಭಕ್ರಿ, ಜಾವೀದ ಹುಸೇನ್ ಸೇರಿದಂತೆ ಕಾರ್ಯಕಾರಿಣಿ ಹಾಗೂ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!