ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ – ಶಾಂತಪ್ಪ ಹೊಸೂರು


ಸುರಪುರ ಟೈಮ್ಸ್ ವಾರ್ತೆ

ಸುರಪುರ; ನಗರದ ಕುಂಬಾರಪೇಟೆಯಲ್ಲಿರುವ ಕಟ್ಟಡ ಕಾರ್ಮಿಕ ಭವನದಲ್ಲಿ ಸುರಪುರ ನಗರಸಭೆಯ ಡೇ–ನಲ್ಮ್ (DAY-NULM) ಯೋಜನೆಯಡಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (PM-SYM) ಯೋಜನೆಯ ವಿಶೇಷ ಜಾಗೃತಿ ಅಭಿಯಾನವನ್ನು ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾಯಿತು.
ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಗುರಿಯಾಗಿಸಿಕೊಂಡು ಹಮ್ಮಿಕೊಳ್ಳಲಾದ ಈ ಅಭಿಯಾನದಲ್ಲಿ ಯೋಜನೆಯ ಮಹತ್ವ, ಅರ್ಹತೆ ಹಾಗೂ ಲಭ್ಯವಿರುವ ಸೌಲಭ್ಯಗಳ ಕುರಿತು ಕಾರ್ಮಿಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಾಂತಪ್ಪ ಹೊಸೂರು, ಈಗಾಗಲೇ ಪ್ರಧಾನ ಮಂತ್ರಿ ಆತ್ಮನಿರ್ಭರ್ ನಿಧಿ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರುವ ಬೀದಿ ವ್ಯಾಪಾರಿಗಳು ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಂಡು ಮಾಸಿಕ ಪಿಂಚಣಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರದ ಅಸಂಘಟಿತ ವಲಯದಲ್ಲಿ ತೊಡಗಿರುವ ಪ್ರತಿಯೊಬ್ಬ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರುಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಯೋಜನೆಯ ಪ್ರಮುಖ ಅಂಶಗಳು
ನೋಂದಣಿ ಪ್ರಕ್ರಿಯೆ :
18 ರಿಂದ 40 ವರ್ಷ ವಯಸ್ಸಿನ ಅಸಂಘಟಿತ ಕಾರ್ಮಿಕರು ಯೋಜನೆಯಡಿ ನೋಂದಾಯಿಸಿಕೊಳ್ಳುವ ವಿಧಾನ ಹಾಗೂ ಮಾಸಿಕ ವಂತಿಗೆಯ ವಿವರಗಳನ್ನು ತಿಳಿಸಲಾಯಿತು.
ಪಿಂಚಣಿ ಸೌಲಭ್ಯ :
ಯೋಜನೆಯಲ್ಲಿ ನೋಂದಾಯಿತರಾದ ಕಾರ್ಮಿಕರಿಗೆ 60 ವರ್ಷ ಪೂರೈಸಿದ ಬಳಿಕ ಪ್ರತಿ ತಿಂಗಳು ರೂ.3,000 ಖಚಿತ ಪಿಂಚಣಿ ದೊರೆಯುತ್ತದೆ ಎಂಬ ಮಾಹಿತಿ ನೀಡಲಾಯಿತು.
ಕಾರ್ಮಿಕರ ಭಾರೀ ಸ್ಪಂದನೆ :
ಕುಂಭಾರಪೇಟೆ ಹಾಗೂ ಸುತ್ತಮುತ್ತಲಿನ ನೂರಾರು ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಅಭಿಯಾನದಲ್ಲಿ ಭಾಗವಹಿಸಿ ಯೋಜನೆಯ ಪ್ರಯೋಜನಗಳ ಕುರಿತು ತಿಳಿದುಕೊಂಡರು.
ಮಾರ್ಗದರ್ಶನ :
ಡೇ–ನಲ್ಮ್ ಯೋಜನೆಯ ಸಿಬ್ಬಂದಿಗಳು ಸ್ಥಳದಲ್ಲೇ ನೋಂದಣಿಗೆ ಅಗತ್ಯವಿರುವ ದಾಖಲೆಗಳು — ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಕುರಿತು ವಿವರಿಸಿ ಕಾರ್ಮಿಕರ ಸಂದೇಹಗಳನ್ನು ಪರಿಹರಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಶರಣು, ಕೆನರಾ ಬ್ಯಾಂಕ್ ಕ್ಷೇತ್ರಾಧಿಕಾರಿ ವಿಜಯ ಮಾಹಾಂತೇಶ, ಕರ್ನಾಟಕ ಬ್ಯಾಂಕ್ ಕ್ಷೇತ್ರಾಧಿಕಾರಿ ಗದ್ದೆಪ್ಪ, ಕಟ್ಟಡ ಕಾರ್ಮಿಕ ಸಂಘದ ಸದಸ್ಯ ಗೋಪಾಲ್ ಗುತ್ತೇದಾರ್ ಮೇದಗಲ್ಲಿ ಸೇರಿದಂತೆ ಹಲವಾರು ಕಾರ್ಮಿಕರು ಭಾಗವಹಿಸಿದ್ದರು.
ಸಮುದಾಯ ಸಂಪನ್ಮೂಲ ವ್ಯಕ್ತಿ ಕುಮಾರಿ ಗೀತಾ ಸ್ವಾಗತಿಸಿದರು, ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!