ಭವ್ಯ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವಕ್ಕೆ ರಂಗಂಪೇಟೆ ಸಜ್ಜು, ಪುರಾತನ ಈಶ್ವರ ದೇವಸ್ಥಾನ ವಿರಾಟ ಹಿಂದೂ ಧರ್ಮ ಜಾಗೃತಿ ಸಮಿತಿಯಿಂದ ಜೀರ್ಣೋದ್ಧಾರ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ರಂಗಂಪೇಟೆಯಲ್ಲಿರುವ ಪುರಾತನ ಶ್ರೀ ಈಶ್ವರ ದೇವಾಲಯದಲ್ಲಿ ಫೆಬ್ರವರಿ 15ರಂದು ಭಾನುವಾರ ಮಹಾ ಶಿವರಾತ್ರಿ ಜಾಗರಣೆ ಮಹೋತ್ಸವವನ್ನು ಭಕ್ತಿ–ಶ್ರದ್ಧೆಯೊಂದಿಗೆ ಆಯೋಜಿಸಲು ಭಕ್ತರು ಹಾಗೂ ಸಂಘಟಕರು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಈ  ವರ್ಷದಿಂದ ದೇವಾಲಯದಲ್ಲಿ  ಶಿವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರಿ ವಿಶೇಷ ಪೂಜೆ, ಜಾಗರಣೆ ಹಾಗೂ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ವರ್ಷದ ಜಾಗರಣೆ ಕಾರ್ಯಕ್ರಮವನ್ನು ಸಂಸ್ಥಾನದ ಪ್ರಮುಖರಾದ ಶ್ರೀ ರಾಜಾ ಕೃಷ್ಣಪ್ಪ ನಾಯಕರು ಅವರು ಸಾಯಂಕಾಲ 6 ಗಂಟೆಗೆ ಉದ್ಘಾಟಿಸಲಿದ್ದಾರೆ. ರಾಜ ಪುರೋಹಿತರಾದ ಶ್ರೀ ಕೇದಾರನಾಥ ಶಾಸ್ತ್ರಿಗಳು ಅವರ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಪ್ರವಚನವನ್ನು ರಂಗಂಪೇಟೆ–ತಿಮ್ಮಾಪುರದ ಹಿರಿಯರಾದ ಶ್ರೀ ಜನಾರ್ಧನ ಪಾಣೀಭಾತೆ ಅವರು ನೀಡಲಿದ್ದು, ಶಿವಭಕ್ತಿಯ ಮಹತ್ವ ಹಾಗೂ ಸನಾತನ ಧರ್ಮದ ಮೌಲ್ಯಗಳ ಕುರಿತು ಭಕ್ತರನ್ನು ಪ್ರೇರೇಪಿಸಲಿದ್ದಾರೆ.
ಕಾರ್ಯಕ್ರಮದ ಆರಂಭವಾಗಿ ಬೆಳಿಗ್ಗೆ 9 ಗಂಟೆಗೆ ಶ್ರೀ ನಗರೇಶ್ವರ ದೇವಸ್ಥಾನದಿಂದ ಶ್ರೀ ಬಸವೇಶ್ವರ ದೇವಸ್ಥಾನದ ಮಾರ್ಗವಾಗಿ ಶ್ರೀ ಈಶ್ವರ ಅಂಗವನ್ನು ಬಾಜಿ–ಬಜಂತ್ರಿಯೊಂದಿಗೆ ಭಕ್ತರೊಡಗೂಡಿ ಮಂಟಪಕ್ಕೆ ತರಲಾಗುತ್ತದೆ. ಈ ಮೆರವಣಿಗೆ ವೇಳೆ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ನಂತರ ಬೆಳಿಗ್ಗೆ 10.45 ಗಂಟೆಗೆ ಶ್ರೀ ಈಶ್ವರ ಲಿಂಗದ ವಿಶೇಷ ಪೂಜೆ ನಡೆಯಲಿದ್ದು, ಭಕ್ತರು ದರ್ಶನ ಪಡೆದು ಪುಣ್ಯಲಾಭ ಪಡೆಯಲಿದ್ದಾರೆ.
ಸಾಯಂಕಾಲ ಜಾಗರಣೆ ಉದ್ಘಾಟನೆಯ ಬಳಿಕ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ಹಿಂದೂ ಯುವಕರಿಂದ ನಿರಂತರ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾರ್ಟ್ ಆಫ್ ಲಿವಿಂಗ್ ಜಿಲ್ಲಾ ಸಂಚಾಲಕರು ಶಿಲ್ಪಾ ಅವಂಟಿ  ಹಾಗೂ ಸಂಗಡಿಗರಿಂದ  ಶಿವಭಕ್ತಿ ಗೀತಗಳು, ಶಿವನಾಮ ಸ್ಮರಣೆ ಹಾಗೂ ಧ್ಯಾನಮಯ ವಾತಾವರಣದಿಂದ ದೇವಸ್ಥಾನ ಆವರಣ ಸಂಪೂರ್ಣ ಆಧ್ಯಾತ್ಮಿಕ ಕಳೆಯಿಂದ ಕಂಗೊಳಿಸಲಿದೆ.
ಮುಂದಿನ ದಿನ ಫೆಬ್ರವರಿ 16ರಂದು ಸೋಮವಾರ ಬೆಳಿಗ್ಗೆ 9 ಗಂಟೆಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ.
ಈ ಮಹೋತ್ಸವವನ್ನು ವಿರಾಟ ಹಿಂದೂ ಧರ್ಮ ಜಾಗೃತಿ ಸಮಿತಿ (ರಿ) ವತಿಯಿಂದ ಆಯೋಜಿಸಲಾಗಿದ್ದು, ಸನಾತನ ಧರ್ಮದ ಉಳಿವಿಗಾಗಿ ಮತ್ತು ಧಾರ್ಮಿಕ ಏಕತೆಯ ಸಂದೇಶ ನೀಡುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಈ ಕಾರ್ಯಕ್ರಮವು ಸುರಪುರ ತಾಲೂಕಿನಲ್ಲಿ ಭಕ್ತಿಭಾವದ ಮಹಾಸಂಗಮವಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!