ಸುರಪುರದ ಶ್ರೀ ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯ ೨೬ನೇ ವಾರ್ಷಿಕೋತ್ಸವ| ಕಲಿಯುಗದಲ್ಲಿ ಭಜನೆಯೇ ಆತ್ಮಶಾಂತಿಯ ಮಾರ್ಗ;ಗಣೇಶ ಜಾಗೀರದಾರ

ಸುರಪುರ ಟೈಮ್ಸ್ ವಾರ್ತೆ
ಸುರಪುರ:‘ಕಲಿಯುಗದಲ್ಲಿ ದೇವರ ಸಾಕ್ಷಾತ್ ದರ್ಶನ ಭಾಗ್ಯ ಇಲ್ಲ. ದೇವರ ನಾಮಸ್ಮರಣೆ ಮತ್ತು ಭಜನೆ ಮಾಡಿದರೆ ದೇವರ ಕೃಪಾಕಟಾಕ್ಷ ಲಭಿಸಿ ಆತ್ಮಶಾಂತಿಯ ಮಾರ್ಗವಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ’ ಎಂದು ವತನದಾರ ಗಣೇಶ ಜಾಗೀರದಾರ ಹೇಳಿದರು.
ನಗರದ ಭೂಸಹಿತ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾನುವಾರ ವೇಣುಗೋಪಾಲ ಮಹಿಳಾ ಭಜನಾ ಮಂಡಳಿಯ ೨೬ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಭಜನಾ ಮಂಡಳಿ ಕಳೆದ ೨೬ ವರ್ಷಗಳಿಂದ ನಿರಂತರವಾಗಿ ಪ್ರತಿ ಶನಿವಾರ ಹಾಗೂ ಹಬ್ಬ-ಹರಿದಿನಗಳಲ್ಲಿ ಭಜನೆ ನಡೆಸುತ್ತಿರುವುದು ಅನುಕರಣೀಯ. ದೇಶದ ವಿವಿಧ ಪುಣ್ಯಕ್ಷೇತ್ರಗಳಿಂದ ಆಹ್ವಾನ ಸ್ವೀಕರಿಸಿ ದೇವರ ನಾಮಪ್ರಸ್ತುತಪಡಿಸಿರುವುದು ದೊಡ್ಡ ಸಾಧನೆ’ ಎಂದರು.
‘ತಿರುಮಲೆ ವೆಂಕಟೇಶ್ವರನ ಮೆಟ್ಟಿಲೋತ್ಸವ ಹಾಗೂ ಬ್ರಹ್ಮರಥೋತ್ಸವಗಳಲ್ಲಿ ಹಲವು ಬಾರಿ ಪಾಲ್ಗೊಂಡಿರುವುದು ಸದಸ್ಯರ ಸುಕೃತ. ಮಹಿಳೆಯರು ಹೆಚ್ಚೆಚ್ಚು ಭಜನಾ ಮಂಡಳಿಗೆ ಸೇರ್ಪಡೆಗೊಂಡು ದೇವರ ನಾಮಸ್ಮರಣೆ ಮಾಡಬೇಕು’ ಎಂದು ಕರೆ ನೀಡಿದರು.
‘ಭಕ್ತಿಯಿಂದ ಭಜನೆಯಲ್ಲಿ ತೊಡಗಿದರೆ ಕಷ್ಟಗಳು ಪರಿಹಾರವಾಗುತ್ತವೆ. ಮನೆಗಳಲ್ಲಿ ಕಲ್ಯಾಣ ಕಾರ್ಯಗಳು ಜರುಗುತ್ತವೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ’ ಎಂದು ತಿಳಿಸಿದರು.
ಲಕ್ಷ್ಮೀನಾರಾಯಣ ಜೋಷಿ, ಉಮಾಶಂಕರ ದೀಕ್ಷಿತ್, ಪವನಭಟ್ಟ ಜೋಷಿ, ಶ್ರೀನಿವಾಸ ದೇವಡಿ, ರಮೇಶ್ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷೆ ರಾಧಾಬಾಯಿ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಉಷಾ ಕುಲಕರ್ಣಿ ನಿರೂಪಿಸಿದರು. ಸುರೇಖಾ ನಾಗರಾಳ ವಂದಿಸಿದರು.
ಮಂತ್ರಾಲಯದ ಅನುಗ್ರಹದ ಪ್ರಶಸ್ತಿ ಪತ್ರಗಳನ್ನು ಭಜನಾ ಮಂಡಳಿ ಸದಸ್ಯರಿಗೆ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಪೂರ್ವ ಶಾಸ್ತ್ರಿ ಅವರ ಭರತನಾಟ್ಯ ಪ್ರದರ್ಶನ ಗಮನಸೆಳೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ಭಕ್ತಿರಸಮಯ ಭಜನೆ ನಡೆಯಿತು.
ದೇವಕ್ಕಿ ಹೆಮನೂರ, ರಾಧಾ ದೇವಡಿ, ಉಜ್ವಲಾ ಭಟ್, ಸುನಂದಾ ದೇಶಪಾಂಡೆ, ರಜನಿ ಕುಲಕರ್ಣಿ, ವಿಜಯಲಕ್ಷ್ಮಿ ಶಾಂತಪುರ, ಕಾಮಾಕ್ಷಿ ಜೋಷಿ, ಸುಮಾ ಹಳ್ಳದ, ಜಯಾ ಶಾಂತಪುರ, ವಿಜಯಲಕ್ಷ್ಮಿ ಜೋಷಿ, ಶಾರದಾ ಕುಲಕರ್ಣಿ, ಉಜ್ವಲಾ ಗಡ್ಡದ, ಅಮೃತಾ ಶಾಸ್ತ್ರಿ, ಕೆ. ಮಂಜುಳಾ, ವನಜಾ ಚಾಮನಾಳ, ರಾಘಮ್ಮ ಕುಲಕರ್ಣಿ, ಕಲ್ಪನಾ ಗಡ್ಡದ, ಗಾಯತ್ರಿ ಜಾಗೀರದಾರ, ವಿನೋದಾ ಜೋಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!