ಆರೋಗ್ಯ ಇಲಾಖೆ ಸಮಸ್ಯೆಗಳಿಗೆ ತಕ್ಷಣ ಪರಿಹಾರಕ್ಕೆ ಒತ್ತಾಯ| ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ಮನವಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ನೌಕರರ ವಿವಿಧ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಸುರಪುರ ಮತಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಮುಖಂಡರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ವೃಂದಗಳಲ್ಲಿ ಒಟ್ಟು 36,397 ಅಧಿಕಾರಿ ಮತ್ತು ನೌಕರರು ಸೇವೆ ಸಲ್ಲಿಸುತ್ತಿದ್ದು, ರಾಜ್ಯದ ಸುಮಾರು 6 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಇಲಾಖೆಯಲ್ಲಿ ನಿವೃತ್ತಿ ಸೇರಿದಂತೆ ಹಲವು ಕಾರಣಗಳಿಂದ ಅಧಿಕಾರಿ ಹಾಗೂ ನೌಕರರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅನೇಕ ಹುದ್ದೆಗಳು ಖಾಲಿ ಉಳಿದಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧಿಗಳನ್ನು ಸರಬರಾಜು ಮಾಡಬೇಕು. ಜೊತೆಗೆ ಇಲಾಖೆಯಲ್ಲಿ ವೃಂದ ಹಾಗೂ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕು, ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು ಮತ್ತು ಅರ್ಹ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಪೂರೈಸುವಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದ್ದು, ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಸೃಜಿಸಿರುವ ಹುದ್ದೆಗಳಲ್ಲಿ ಸುಮಾರು 47 ಶೇಕಡಾ ಹುದ್ದೆಗಳು ಖಾಲಿ ಇದ್ದು, ಜನಸಂಖ್ಯೆ ಹೆಚ್ಚಾದರೂ ಹೊಸ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಆದ್ದರಿಂದ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ನೌಕರರಿಗೆ ಸೇವಾ ಭದ್ರತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರನ್ನು ಖಾಯಂಗೊಳಿಸಿ ಅವರ ಸೇವಾವಧಿಯನ್ನು ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸಬೇಕು ಎಂದು ಹೇಳಿದರು.
ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆದು ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಹಿಡಿಯಬೇಕು. ಇಲ್ಲದಿದ್ದರೆ ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾ. ರಾಜಾ ವೆಂಕಪ್ಪ ನಾಯಕ, ಡಾ. ಗಿರೀಶ ಕುಲಕರ್ಣಿ, ಜಿಲ್ಲಾ ನೌಕರರ ಸಂಘದ ಪ್ರಮುಖರಾದ ಗುರುನಾಥ ಹುಲಿಕಲ್, ರೇವಣಸಿದ್ದಪ್ಪ, ಸಂಘಟನಾ ಕಾರ್ಯದರ್ಶಿ ಜಯಶ್ರೀ ಪಾಟೀಲ್,ತಿರುಪತಿ, ಮರೆಪ್ಪ ನಾಯಕ, ಮಹೇಶ ಬರೆದಾರ, ಜಯ ಪವಾರ, ನಾಗರಾಜ ಮಡಿವಾಳರ, ರಾಜಶೇಖರ ನರಬೋಳ, ನಿಂಗಮ್ಮ, ಸಂಗಣ್ಣ ಚಟ್ಟಿ, ರಾಮಚಂದ್ರ ರೆಡ್ಡಿ ಬೋನ್ಹಾಳ, ಸುರೇಶ, ವಿಜಯಲಕ್ಷ್ಮಿ, ಕೃಷ್ಣ ನಾಯಕ, ಚಂದ್ರಕಾಂತ, ಸೋಫಿಲಾಲ್, ಭಾಗಣ್ಣ ಹಾಗೂ ಶೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಸ್ಯೆಗಳಿಗೆ ತಕ್ಷಣ ಪರಿಹಾರ ಅಗತ್ಯ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಔಷಧಿ ಸರಬರಾಜಿನ ಸಮಸ್ಯೆಯಿಂದ ವೈದ್ಯರು ಮತ್ತು ಸಿಬ್ಬಂದಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಅಗತ್ಯ ಔಷಧಿ ಮತ್ತು ಉಪಕರಣಗಳನ್ನು ಪೂರೈಸಬೇಕು.
ಡಾ. ರಾಜಾ ವೆಂಕಪ್ಪ ನಾಯಕ
ಸುರಪುರ ತಾಲೂಕು ವೈದ್ಯಾಧಿಕಾರಿಗಳು


