ಬಜೆಟ್ ಅಧಿವೇಶನದಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರ ಎತ್ತಿದ ಶಾಸಕ ಆರ್‌ವಿಎನ್|ಅಂತರ ಜಿಲ್ಲಾ–ತಾಲೂಕು ಸಂಪರ್ಕ ರಸ್ತೆಗಳು, ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಚಿವರ ಗಮನ ಸೆಳೆದ ಶಾಸಕ.

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕ್ಷೇತ್ರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಪ್ರಶ್ನೆ ಎತ್ತಿ ಸರ್ಕಾರದ ಗಮನ ಸೆಳೆದರು.
ಕ್ಷೇತ್ರದ ಅಂತರ ತಾಲೂಕು ಹಾಗೂ ಅಂತರ ಜಿಲ್ಲಾ ಸಂಪರ್ಕ ರಸ್ತೆಗಳ ಅವಶ್ಯಕತೆ ಕುರಿತು ಶಾಸಕರು ಪ್ರಶ್ನೆ ಕೇಳಿದರು. ಸುರಪುರ ಕ್ಷೇತ್ರವು ಹಲವು ತಾಲೂಕು ಹಾಗೂ ಜಿಲ್ಲೆಗಳ ಸಂಪರ್ಕ ಹೊಂದಿರುವುದರಿಂದ ಜನರ ಸಂಚಾರ, ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ವ್ಯಾಪಾರ ವಹಿವಾಟಿಗೆ ಉತ್ತಮ ರಸ್ತೆ ಸಂಪರ್ಕ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಈ ಕುರಿತು ಸರ್ಕಾರದ ಗಮನಕ್ಕೆ ಪ್ರಸ್ತಾವನೆ ಬಂದಿದೆಯೇ ಎಂದು ಪ್ರಶ್ನಿಸಿದರು. ಈ ಕುರಿತು ಉತ್ತರಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಸರ್ಕಾರದ ಗಮನಕ್ಕೆ ಈ ವಿಷಯ ಬಂದಿದ್ದು ಸುರಪುರ ಕ್ಷೇತ್ರದಲ್ಲಿ ಒಟ್ಟು 203.65 ಕಿಲೋಮೀಟರ್ ಉದ್ದದ 6 ರಾಜ್ಯ ಹೆದ್ದಾರಿ ರಸ್ತೆಗಳು ಇದ್ದು, ಅವುಗಳಲ್ಲಿ ಈಗಾಗಲೇ 157.15 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಳಿದಿರುವ 46.50 ಕಿ.ಮೀ ಉದ್ದದ ರಸ್ತೆಗಳನ್ನು ಕಳೆದ ಸಾಲಿನಲ್ಲಿ ವಾರ್ಷಿಕ ನಿರ್ವಹಣಾ ಅನುದಾನದಡಿ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಇದರ ಜೊತೆಗೆ ಸುರಪುರ ಕ್ಷೇತ್ರದ ಮೂಲಕ ಲಿಂಗಸೂಗೂರ, ಶಹಾಪುರ, ವಡಗೇರಾ, ದೇವದುರ್ಗ, ತಾಳಿಕೋಟಿ ಹಾಗೂ ಸಿಂದಗಿ ತಾಲೂಕುಗಳಿಗೆ ಸಂಪರ್ಕಿಸುವ ಸುಮಾರು 218.97 ಕಿ.ಮೀ ಉದ್ದದ 20 ಜಿಲ್ಲಾ ಮುಖ್ಯ ರಸ್ತೆಗಳು ಹಾದು ಹೋಗುತ್ತಿವೆ. ಈ ಪೈಕಿ ಈಗಾಗಲೇ 132.62 ಕಿ.ಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಉಳಿದಿರುವ 86.35 ಕಿ.ಮೀ ರಸ್ತೆಗಳನ್ನು ವಾರ್ಷಿಕ ನಿರ್ವಹಣೆ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಇದೇ ವೇಳೆ ಸುರಪುರದಲ್ಲಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಕಟ್ಟಡವು ಬಹಳ ಹಳೆಯದಾಗಿದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ ಎಂದು ಶಾಸಕರು ಸದನದಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸುಮಾರು 5 ಕೋಟಿ ರೂ. ಅನುದಾನ ಅಗತ್ಯವಿದ್ದು, 2026–27ನೇ ಆರ್ಥಿಕ ವರ್ಷದ ಅನುದಾನ ಲಭ್ಯತೆ ಮೇರೆಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಇದಲ್ಲದೆ ಸುರಪುರ ಉಪನೋಂದಣಿ ಕಚೇರಿಗೆ ಸ್ವಂತ ಕಟ್ಟಡವಿಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಶಾಸಕರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೂ ತಂದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ಸದನದಲ್ಲಿ ಪ್ರಶ್ನೆ ಎತ್ತಿರುವುದು ಕ್ಷೇತ್ರದ ಜನರಲ್ಲಿ ನಿರೀಕ್ಷೆ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!