ನಾಳೆ ತಿಂಥಣಿಯಲ್ಲಿ  ಸುರಪುರ ಸರ್ಕಾರಿ ಪಾಲಿಟೆಕ್ನಿಕ್  ವತಿಯಿಂದ NSS ವಿಶೇಷ ಶಿಬಿರಕ್ಕೆ ಚಾಲನೆ – ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ಮಹತ್ವದ ಕಾರ್ಯಕ್ರಮ|ಮಾರ್ಚ್ 20ರಿಂದ 24ರವರೆಗೆ ತಿಂಥಣಿಯಲ್ಲಿ ಐದು ದಿನಗಳ ಶಿಬಿರ – ಪರಿಸರ ಸಂರಕ್ಷಣೆ, ಕಾನೂನು ಅರಿವು, ವ್ಯಕ್ತಿತ್ವ ವಿಕಾಸ ಸೇರಿದಂತೆ ಬಹುಮುಖ ಜಾಗೃತಿ ಚಟುವಟಿಕೆಗಳು.


ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್, ಸುರಪುರ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (NSS) ಅಡಿಯಲ್ಲಿ “ವಾರ್ಷಿಕ ವಿಶೇಷ ಶಿಬಿರ 2025-26” ಅನ್ನು ಮಾರ್ಚ್ 20ರಿಂದ 24ರವರೆಗೆ ಸುರಪುರ ತಾಲೂಕಿನ ತಿಂಥಣಿಯ ಶ್ರೀ ಜಗದ್ಗುರು ಮೌನೇಶ್ವರ ಧಾರ್ಮಿಕ ಕ್ಷೇತ್ರದಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ಈ ಐದು ದಿನಗಳ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣಗಳು ಹಾಗೂ ರಾಷ್ಟ್ರೀಯ ಚಿಂತನೆ ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳನ್ನು ಒಳಗೊಂಡಿದೆ.
ಉದ್ಘಾಟನಾ ಸಮಾರಂಭದ ವಿವರ:
ಮಾರ್ಚ್ 20ರಂದು ಸಂಜೆ 4:00 ಗಂಟೆಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶ್ರೀಶ್ರೀಶ್ರೀ ಮೌನೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಉದ್ಘಾಟನೆಯನ್ನು ಶ್ರೀ ಗಂಗಾಧರ ನಾಯಕ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ (ಮಾಜಿ ತಾಲೂಕ ಪಂಚಾಯತಿ ಸದಸ್ಯರು), ಶ್ರೀ ಸಂಜೀವಪ್ಪ ನಾಯಕ (ಗ್ರಾಮ ಪಂಚಾಯತಿ ಸದಸ್ಯರು) ಹಾಗೂ ಶ್ರೀ ಶಿವಾನಂದ ಸ್ವಾಮಿ ಹಿರೇಮಠ (ವ್ಯವಸ್ಥಾಪಕರು, ದೇವಸ್ಥಾನ) ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಸುರಪುರದ ಪ್ರಾಚಾರ್ಯರಾದ ಶ್ರೀ ಶ್ರೀಕಾಂತ ಬಿ.ಕೆ. ವಹಿಸಲಿದ್ದಾರೆ.


ಶಿಬಿರದ ಮುಖ್ಯ ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳು:
ಮಾರ್ಚ್ 21, 2026
ಮಧ್ಯಾಹ್ನ 3:00 ಗಂಟೆಗೆ “ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ” ವಿಷಯದ ಕುರಿತು ಅರಣ್ಯಾಧಿಕಾರಿ ಶ್ರೀ ರಾಜಪ್ಪ ಅವರು ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 4:30 ಗಂಟೆಗೆ “ವರದಕ್ಷಿಣೆ ಪದ್ಧತಿ ನಿರ್ಮೂಲನೆ ಹಾಗೂ ಸಾಮಾಜಿಕ ಕುಸಿತಗಳು” ವಿಷಯದ ಕುರಿತು ಮುಖ್ಯೋಪಾಧ್ಯಾಯರಾದ ಶ್ರೀ ಹನುಮಂತ್ರಾಯ ದೊರೆ ಉಪನ್ಯಾಸ ನೀಡಲಿದ್ದಾರೆ.
ಮಾರ್ಚ್ 22, 2026
ಮಧ್ಯಾಹ್ನ 3:00 ಗಂಟೆಗೆ “ಕಾನೂನು ಪಾಲನೆ ಹಾಗೂ ಅಪರಾಧ ತಡೆ” ಕುರಿತು ಪೊಲೀಸ್ ಇಲಾಖೆ ಸಿಬ್ಬಂದಿಯಾದ ಶ್ರೀ ದಯಾನಂದ ಅವರು ಜಾಗೃತಿ ಮೂಡಿಸಲಿದ್ದಾರೆ.
ಮಧ್ಯಾಹ್ನ 4:30 ಗಂಟೆಗೆ “ವ್ಯಕ್ತಿತ್ವ ವಿಕಾಸ ಮತ್ತು ಜೀವನ ಮೌಲ್ಯಗಳು” ಕುರಿತು ಉಪನ್ಯಾಸಕರಾದ ಶ್ರೀ ದೇವು ಹೆಬ್ಬಾಳ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಮಾರ್ಚ್ 23, 2026
ಮಧ್ಯಾಹ್ನ 3:30 ಗಂಟೆಗೆ “ಅಗ್ನಿ ಅವಘಡ ಮತ್ತು ಸುರಕ್ಷತೆ ಅರಿವು” ಕುರಿತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಪ್ರಾಯೋಗಿಕ ಮಾಹಿತಿ ನೀಡಲಿದ್ದಾರೆ.
ಮಧ್ಯಾಹ್ನ 4:30 ಗಂಟೆಗೆ “ಯುವ ರೆಡ್ ಕ್ರಾಸ್ ಅರಿವು” ಕುರಿತು ಶ್ರೀ ಶ್ರೀಶೈಲ ಹಿರೇಮಠ ಅವರು ಉಪನ್ಯಾಸ ನೀಡಲಿದ್ದಾರೆ.
ಇತರೆ ಚಟುವಟಿಕೆಗಳು:
ಶಿಬಿರದ ಅವಧಿಯಲ್ಲಿ ಸ್ವಚ್ಛತಾ ಅಭಿಯಾನ, ಗ್ರಾಮ ಸುತ್ತಮುತ್ತ ಪರಿಸರ ಶುದ್ಧೀಕರಣ, ಆರೋಗ್ಯ ಜಾಗೃತಿ, ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು, ಯುವಕರಿಗೆ ನಾಯಕತ್ವ ತರಬೇತಿ ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಸಮಾರಂಭ:
ಮಾರ್ಚ್ 24ರಂದು ಬೆಳಿಗ್ಗೆ 10:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಡಿ.ವೈ.ಎಸ್.ಪಿ. ಶ್ರೀ ಚಾವಿದ್ ಇನಾಮದಾರ, ಪೋಲೀಸ್ ಇನ್ಸ್‌ಪೆಕ್ಟರ್ ಶ್ರೀ ಉಮೇಶ ನಾಯಕ, ಉಪನ್ಯಾಸಕಿ ಶ್ರೀಮತಿ ರೇಣುಕಾ ಪಸ್ತಾಪುರ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಬಸವರಾಜ ಗೋಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ಶ್ರೀಕಾಂತ ಬಿ.ಕೆ. ವಹಿಸಲಿದ್ದಾರೆ.
ಶಿಬಿರದ ಉದ್ದೇಶ:
ಈ ವಿಶೇಷ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ “ಸೇವೆಯೇ ಮಹತ್ತರ ಧರ್ಮ” ಎಂಬ ಮೌಲ್ಯವನ್ನು ಬೇರೂರಿಸುವುದು, ಸಮಾಜದ ಸಮಸ್ಯೆಗಳ ಪರಿಹಾರದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವುದು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕೈಜೋಡಿಸುವುದು ಮುಖ್ಯ ಉದ್ದೇಶವಾಗಿದೆ.
ಸರ್ವ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!