ಹುಣಸಗಿ ತಾಲೂಕಿನ ಚನ್ನೂರು ಗ್ರಾಮದ ಗದ್ದೆಯಲ್ಲಿ ಭಾರೀ ಮೊಸಳೆ ಪ್ರತ್ಯಕ್ಷ – ರೈತರಲ್ಲಿ ಆತಂಕ|ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭ

ಸುರಪುರ ಟೈಮ್ಸ್ ವಾರ್ತೆ
ಹುಣಸಗಿ: ಯಾದಗಿರಿ ಜಿಲ್ಲೆಯ ಹುಣಸಗಿ ಸಮೀಪದ ಚನ್ನೂರು ಗ್ರಾಮದ ಗದ್ದೆಯಲ್ಲಿ ಭಾರೀ ಗಾತ್ರದ ಮೊಸಳೆ ಪ್ರತ್ಯಕ್ಷವಾದ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಗದ್ದೆಗೆ ತೆರಳಿದ್ದ ರೈತರು ನೀರಿನ ಪ್ರದೇಶದ ಬಳಿ ದೊಡ್ಡ ಮೊಸಳೆಯನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಈ ವಿಷಯ ಗ್ರಾಮದಲ್ಲಿ ವೇಗವಾಗಿ ಹರಡುತ್ತಿದ್ದಂತೆ, ರೈತರು ಗದ್ದೆಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಜಾನುವಾರುಗಳ ಸುರಕ್ಷತೆಗೂ ಭೀತಿ ಎದುರಾಗಿದೆ.
ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದಾರೆ.
ಸುರಪುರ ಅರಣ್ಯ ಅಧಿಕಾರಿ ಆರ್  ಎಫ್ ಭಾಗಪ್ಪ  ಸುರಪುರ ಟೈಮ್ಸ್ ಮಾತನಾಡಿ “ಚನ್ನೂರು ಗ್ರಾಮದ ಗದ್ದೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗುತ್ತಿದೆ. ಮೊಸಳೆಯ ಚಲನವಲನವನ್ನು ಗಮನಿಸಿ ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ.
ಗ್ರಾಮಸ್ಥರು ಭಯಪಡಬೇಕಾಗಿಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಪ್ರದೇಶಗಳಿಗೆ ಒಬ್ಬರೇ ಹೋಗಬಾರದು. ಮಕ್ಕಳನ್ನು ಆ ಭಾಗಕ್ಕೆ ಬಿಡಬಾರದು. ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.
ಎಚ್ಚರಿಕೆ:
ಗ್ರಾಮಸ್ಥರು ನೀರಿನ ಪ್ರದೇಶಗಳ ಬಳಿ ಹೆಚ್ಚು ಎಚ್ಚರಿಕೆ ವಹಿಸಬೇಕು ಹಾಗೂ ಗುಂಪಾಗಿ ಮಾತ್ರ ಗದ್ದೆಗಳಿಗೆ ತೆರಳಬೇಕು ಎಂದು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!