ಧರ್ಮ–ಸಂಸ್ಕೃತಿಯ ದೀಪವಾಗಿ ಕಂಗೊಳಿಸಿದೆ |ಕಾಶಿ ಜಗದ್ಗುರು ಆಶೀರ್ವಚನ – ಯುಗಾದಿ ಹಬ್ಬದ ಮಹತ್ವ ಸಾರಣೆ | ಧರ್ಮಸಭೆ, ಸಾಮೂಹಿಕ ವಿವಾಹಕ್ಕೆ ಭಕ್ತರ ಮೆಚ್ಚುಗೆ.

ಸುರಪುರ ಟೈಮ್ಸ್ ವಾರ್ತೆ
ಸುರಪುರ,: ತಾಲೂಕಿನ ತಳವಾರಗೇರಾ ಗ್ರಾಮದ ವೀರ ತಪಸ್ಸಿ ಚನ್ನವೀರ ಶಿವಾಚಾರ್ಯ ಬೃಹನ್ಮಠದಲ್ಲಿ ನಡೆದ 18ನೇ ವರ್ಷದ ಜಾತ್ರಾ ಮಹೋತ್ಸವವು ಭಕ್ತರ ಅಪಾರ ಶ್ರದ್ಧಾ-ಭಕ್ತಿಯ ನಡುವೆ ಸಂಭ್ರಮ ಸಡಗರದಿಂದ ನೆರವೇರಿತು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ಮಠದಲ್ಲಿ ಕತೃ ಗದ್ದುಗೆಗೆ ವೈದಿಕ ವಿಧಾನದಲ್ಲಿ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಸೇವೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಸಾಗಿದ್ದು, ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು. ಜಾತ್ರೆ ಪ್ರಯುಕ್ತ ಮಾರ್ಚ್ 9ರಿಂದ ಪ್ರತಿದಿನ ರಾತ್ರಿ ಜಗದ್ಗುರು ತಿಂಥಣಿಯ ಮೌನೇಶ್ವರರ ಪುರಾಣ ಪ್ರವಚನಗಳು ಜರುಗಿದ್ದು, ಜಾತ್ರೆಯಂದು ಮಂಗಲಗೊಂಡವು.
ಬಳಿಕ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಿದವು. ಧರ್ಮಸಭೆಯಲ್ಲಿ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರರಾದ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಯುಗಾದಿ ಹಬ್ಬವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಹಬ್ಬವಾಗಿದ್ದು, ಅದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.


ಯುಗಾದಿ ಹಬ್ಬವು ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂದೇಶವನ್ನು ನೀಡುತ್ತದೆ. “ಬೇವು-ಬೆಲ್ಲದಂತೆ ಜೀವನವನ್ನು ಸಮತೋಲನದಿಂದ ಸಾಗಿಸಬೇಕು” ಎಂದು ಅವರು ತಿಳಿಸಿದರು. ಯುಗಾದಿ ಮುಹೂರ್ತವನ್ನು “ಸಾಡೇ ತಿನ್ ಮುಹೂರ್ತ” ಎಂದು ಕರೆಯಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಪ್ರಾರಂಭಿಸುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸಾಮೂಹಿಕ ವಿವಾಹದ ಮಹತ್ವವನ್ನು ವಿವರಿಸಿದ ಅವರು, ಅನಾವಶ್ಯಕ ವೆಚ್ಚಗಳನ್ನು ತಡೆಯಲು ಸಾಮೂಹಿಕ ವಿವಾಹಗಳು ಸಹಾಯಕವಾಗುತ್ತವೆ. ನೂತನ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭಾರತವು ಭವ್ಯ ಸಂಸ್ಕೃತಿಯನ್ನು ಹೊಂದಿದ ದೇಶವಾಗಿದ್ದು, ಸರ್ವ ಜನಾಂಗದವರು ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಸಹಬಾಳ್ವೆ ನಡೆಸಬೇಕು. ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯ ಹಿಂದೆ ಹೋಗದೆ, ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿವಪ್ರಸಾದ ದೇವರು, ಮಲ್ಲ ಸಾಹುಕಾರ ಮುಧೋಳ, ಶರಬಯ್ಯ ಸ್ವಾಮಿ, ನಾಗಯ್ಯಸ್ವಾಮಿ, ರಾಮಚಂದ್ರ ದೊರೆ, ಮಾನಪ್ಪ ಹುಜರತಿ, ಬಸವರಾಜ ಸಜ್ಜನ್, ಯಲ್ಲಪ್ಪ ನಾಯಕ ಮಲ್ಲಿಭಾವಿ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಮಲ್ಲಣಗೌಡ ಸ್ವಾಗತಿಸಿ, ವಾಸುದೇವ ಅರಕೇರಿ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!