ಪೆಟ್ರೋಲ್ ಬಂಕ್ ಡೀಲರ್‌ಗಳ ಸಭೆ. ಇಂಧನ ಕೊರತೆ ಇಲ್ಲ|ಅವಸರದ ಖರೀದಿ ಬೇಡ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ;DYSP ಜಾವೇದ್ ಇನಾಂದಾರ್


ಸುರಪುರ ಟೈಮ್ಸ್ ವಾರ್ತೆ

ಸುರಪುರ;ತಾಲೂಕಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಸಮರ್ಪಕ ದಾಸ್ತಾನು ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ , ಅವಸರದ ಖರೀದಿ ಬೇಡ ಎಂದು ಡಿವೈಎಸ್‌ಪಿ ಜಾವೇದ್ ಇನಾಂದಾರ್ ಸ್ಪಷ್ಟಪಡಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ನಡೆದ ಪೆಟ್ರೋಲ್ ಬಂಕ್ ಡೀಲರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಇಂಧನ ಸರಬರಾಜು ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.
ತಾಲೂಕಿನಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ಇಂಧನ ಸಂಗ್ರಹವಿದ್ದು, ಮುಂದುವರಿದ ಸರಬರಾಜು ಕೂಡ ಖಚಿತವಾಗಿದೆ. ಆದ್ದರಿಂದ ಊಹಾಪೋಹಗಳಿಗೆ ಅವಕಾಶ ಕೊಡಬಾರದು, ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು.


ಡೀಲರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಇಂಧನವನ್ನು ಅನಧಿಕೃತವಾಗಿ ಸಂಗ್ರಹಿಸುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅಥವಾ ಹೆಚ್ಚುವರಿ ದರಕ್ಕೆ ಮಾರಾಟ ಮಾಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದರು. ನಿಗದಿತ ದರದಲ್ಲಿಯೇ ಗ್ರಾಹಕರಿಗೆ ಇಂಧನ ನೀಡಬೇಕು ಎಂದು ಸೂಚಿಸಿದರು.
ಗ್ರಾಹಕರಿಗೂ ಸಲಹೆ ನೀಡಿದ ಅವರು, ಬಾಟಲಿ ಅಥವಾ ಕ್ಯಾನ್‌ಗಳಲ್ಲಿ ಇಂಧನ ಸಂಗ್ರಹಿಸಿಕೊಳ್ಳಬಾರದು. ಅಗತ್ಯವಿರುವಷ್ಟು ಮಾತ್ರ ಖರೀದಿ ಮಾಡಿ ಸಹಕರಿಸಬೇಕು. ಆತಂಕದಿಂದ ಹೆಚ್ಚುವರಿ ಖರೀದಿ ಮಾಡುವುದರಿಂದ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿದರು.


ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಯಾವುದೇ ತೊಂದರೆ ಕಂಡುಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಪಿಐ ಉಮೇಶ್ ನಾಯಕ ಮಾತನಾಡಿದರು. ವಿವಿಧ ಪೆಟ್ರೋಲ್ ಬಂಕ್‌ಗಳ ನಿರ್ವಹಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!