UPSC ಸಾಧಕನಿಗೆ ಸುರಪುರದ ಅದಿತಿ ಹೋಟೆಲ್‌ನಲ್ಲಿ ಭರ್ಜರಿ ಅಭಿನಂದನೆ | ಕಷ್ಟಗಳ ನಡುವೆ ಕನಸು ಸಾಧಿಸಿದ ಚಂದ್ರಶೇಖರ್ – ಯುವಕರಿಗೆ ಸ್ಪೂರ್ತಿ!

ಸುರಪುರ ಟೈಮ್ಸ್ ವಾರ್ತೆ

ಸುರಪುರ: 2025-26ನೇ ಸಾಲಿನ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲೂಕಿನ ಚೆನ್ನೂರು ಗ್ರಾಮದ ಚಂದ್ರಶೇಖರ (ತಂದೆ: ಮಾನಶೇಪ್ಪ) ಅವರಿಗೆ ಕನ್ನಡ ಸಹೃದಯ ಗೆಳೆಯರ ಬಳಗದಿಂದ ನಗರದ ಅದಿತಿ ಹೋಟೆಲ್‌ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸುರಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಯಲ್ಲಪ್ಪ ಕಾಡ್ಲೂರು ಅವರು ಮಾತನಾಡಿ, “UPSCಂತಹ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಕಷ್ಟಗಳ ನಡುವೆ ಈ ಸಾಧನೆ ಮಾಡಿದ ಚಂದ್ರಶೇಖರ್ ಅವರು ಅಭಿನಂದನಾರ್ಹರು. ಅವರು ನಮ್ಮ ಹಿಂದುಳಿದ ಭಾಗದ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ,” ಎಂದು ಶ್ಲಾಘಿಸಿದರು.
ನಂತರ ಮಾತನಾಡಿದ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶ್ರೀ ಸಂಜೀವ ದರಬಾರಿ ಅವರು, “ಇಂತಹ ಅಭಿನಂದನಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡರೆ ಇನ್ನಷ್ಟು ಪ್ರಭಾವ ಬೀರುತ್ತದೆ. ಚಂದ್ರಶೇಖರ್ ಸರ್ ನಮ್ಮ ಭಾಗದ ಯುವಕರಿಗೆ ಮಾದರಿಯಾಗಿದ್ದಾರೆ. ಇನ್ನೂ ಅನೇಕ ಪ್ರತಿಭೆಗಳು ಈ ಭಾಗದಲ್ಲಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು.


ವೇದಿಕೆಯ ಮೇಲಿದ್ದ ಹಿರಿಯ ಮುಖ್ಯ ಗುರು ಶ್ರೀ ಹಳ್ಳೆಪ್ಪ ಖಂಜಾಂಚಿ ಅವರು ಮಾತನಾಡಿ, “ಹಿಂದುಳಿದ ಭಾಗದಲ್ಲಿ ಅರಳಿದ ಪ್ರತಿಭೆ ಚಂದ್ರಶೇಖರ್. ಈ ಭಾಗದ ವಿದ್ಯಾರ್ಥಿಗಳಿಗೆ ಅವರ ಮಾರ್ಗದರ್ಶನ ಬಹಳ ಮುಖ್ಯ. ಅವರು ತಮ್ಮ ನೇತೃತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಕಾಡೆಮಿ ಪ್ರಾರಂಭಿಸಿದರೆ ಇನ್ನಷ್ಟು ಪ್ರತಿಭೆಗಳು ಬೆಳೆಯಲು ಸಾಧ್ಯ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಮಾನೆಪ್ಪ, ರಾಜೇಂದ್ರಕುಮಾರ್, ಶರಬಸವ ಅಂಗಡಿ, ಮಹಂತೇಶ್ ಗೋನಾಲ್, ಗೋಪಣ್ಣ ಯಾದವ, ಮರಮಣ್ಣ ಮಂಗಿಯಾಳ, ವೀರೇಶ ಗಾದಿ, ದೇವಿಂದ್ರ ನಾಯಕ್, ಹಣಮಂತ್ರಾಯ ನಗನೂರು, ಮಾಳಪ್ಪ ಸರ್ ಹಾಗೂ ಈಶ್ವರ್ ಹೊಸಮನಿ  ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು  ಮಲ್ಲಿಕಾರ್ಜುನ ಕುಲಕರ್ಣಿ (ಗೌಡಗೆರಾ) ನಿರೂಪಿಸಿದರು. ಲಕ್ಷ್ಮಣ ದುದೆಕೊಂಡ (CRP) ಸ್ವಾಗತಿಸಿದರುಸಾಹೇಬರೆಡ್ಡಿ ಇಟಗಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!