ನವೋದಯ ಪರೀಕ್ಷೆಯಲ್ಲಿ ಹುಣಸಗಿ ತಾಲ್ಲೂಕಿನ ಚಿಕ್ಕನಹಳ್ಳಿ  ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಂಧೂ ಬಿರಾದಾರ ಜಿಲ್ಲೆಗೆ ಪ್ರಥಮ RANK – ಈ ಸಾಧನೆಗೆ ಗ್ರಾಮದಲ್ಲಿ ಸಂಭ್ರಮ.

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಪ್ರತಿಭೆ ಮತ್ತು ಪರಿಶ್ರಮ ಒಂದಾಗಿ ಬಂದಾಗ ಯಶಸ್ಸು ತಪ್ಪದೇ ಬರುತ್ತದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ  ಹುಣಸಗಿ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ವಿದ್ಯಾರ್ಥಿನಿ ಸಿಂಧೂ ಬಿರಾದಾರ. ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ಈ ವಿದ್ಯಾರ್ಥಿನಿ, ಇಂದು ತನ್ನ ಗ್ರಾಮಕ್ಕೂ, ಶಾಲೆಗೋ ಹೆಮ್ಮೆಯಾಗಿ ಹೊರಹೊಮ್ಮಿದ್ದಾಳೆ.


ಹುಣಸಗಿ ತಾಲೂಕಿನ ಚಿಕ್ಕನಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿಂಧೂ, ತಮ್ಮ ನಿಯಮಿತ ಅಧ್ಯಯನ, ಶಿಸ್ತು ಮತ್ತು ದೃಢಸಂಕಲ್ಪದ ಮೂಲಕ ಈ ಮಹತ್ತರ ಸಾಧನೆ ಮಾಡಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದಿದ್ದರೂ, ತನ್ನ ಕನಸಿನತ್ತ ನಿರಂತರ ಪರಿಶ್ರಮದೊಂದಿಗೆ ಸಾಗಿದ ಸಿಂಧೂ, ಇಂದು ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿ ಬೆಳೆಯುತ್ತಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಶಾಲೆಯಲ್ಲಿ ಸಿಂಧೂ ಬಿರಾದಾರ ಅವರನ್ನು ಭರ್ಜರಿಯಾಗಿ ಸನ್ಮಾನಿಸಲಾಯಿತು. ಹೂಮಾಲೆ ಹಾಕಿ, ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಸಿಂಧೂ ಅವರ ಸಾಧನೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ನಿಂಗಪ್ಪ ಶೇಕಸಿಂಧೆ, ಪ್ರಧಾನ ಗುರುಗಳಾದ ಅಮರೇಶ್ ಅಂಗಡಿ, ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ಬಸನಗೌಡ ಪಾಟೀಲ್ ಹಾಗೂ ದಾವಲಸಾಬ ಪೀರಾಪುರ, ಪಾಲಕರಾದ ರೇಣುಕಪ್ಪ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಇದೇ ವೇಳೆ ಗ್ರಾಮದ ಮುಖಂಡರಾದ ನಾಗರಾಜ್ ಬಿರಾದಾರ, ಯಲ್ಲಪ್ಪ ಹಳ್ಳಿ, ತಿರುಪತಿ, ವಿರೂಪನಗೌಡ, ಮಹೇಶ್ ವಂದಾಲ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಗೆ ಶುಭಾಶಯ ಕೋರಿದರು.
ಸಿಂಧೂ ಬಿರಾದಾರ ಅವರ ಈ ಅಪೂರ್ವ ಸಾಧನೆ ಚಿಕ್ಕನಹಳ್ಳಿ ಗ್ರಾಮಕ್ಕೆ ಮಾತ್ರವಲ್ಲ, ಸಂಪೂರ್ಣ ಸುರಪುರ ತಾಲ್ಲೂಕಿಗೆ ಕೀರ್ತಿ ತಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವಂತೆ ಎಲ್ಲರೂ ಹಾರೈಸಿದರು. ಅವರ ಈ ಯಶೋಗಾಥೆ, “ಸಾಧನೆಗೆ ಪರಿಸ್ಥಿತಿ ಅಡ್ಡಿಯಲ್ಲ, ಮನಸ್ಸಿನ ದೃಢತೆಯೇ ಮುಖ್ಯ” ಎಂಬ ಸಂದೇಶವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Leave a Reply

Your email address will not be published. Required fields are marked *

error: Content is protected !!