ಯುಗಾದಿ ನವಸಂವತ್ಸರದ ಕವಿಗೋಷ್ಠಿ ವೈಭವ| ಗಮಕಕ್ಕೆ ಸಂಸ್ಕೃತಿ ಉಳಿಸುವ ಶಕ್ತಿ ಇದೆ : ಲಕ್ಷ್ಮೀಕಾಂತ ಮೊಹರೀರ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಗಮಕ ಕಲೆಯು ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನವಾಗಿದ್ದು, ಕನ್ನಡ ಭಾಷೆಯ ಸೊಬಗನ್ನು ಹೆಚ್ಚಿಸುವ ಅಪೂರ್ವ ಪರಂಪರೆ ಆಗಿದೆ ಎಂದು ಗಮಕ ಕಲಾ ಪರಿಷತ್ತಿನ ವಿಭಾಗೀಯ ಅಧ್ಯಕ್ಷ ಲಕ್ಷ್ಮೀಕಾಂತ ಮೊಹರೀರ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ತಾಲೂಕು ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಯುಗಾದಿ ನವಸಂವತ್ಸರದ ಕವಿಗೋಷ್ಠಿ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗಮಕವು ನಾಟಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಪತ್ತನ್ನು ಉಳಿಸಿ ಬೆಳೆಸುವ ಜೀವಂತ ಶಕ್ತಿ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಗಮಕವು ಕನ್ನಡ ಸಾಹಿತ್ಯವನ್ನು ಸಂಗೀತದ ಲಯದಲ್ಲಿ ಓದಿ ಅದರ ಅರ್ಥವನ್ನು ಸರಳವಾಗಿ ವಿವರಿಸುವ ವಿಶಿಷ್ಟ ಕಲಾ ರೂಪವಾಗಿದೆ. ವೇದಗಳ ಕಾಲದಿಂದಲೂ ಗಮಕದ ಉಲ್ಲೇಖವಿದ್ದು, ಕವಿರಾಜಮಾರ್ಗದಲ್ಲಿಯೂ ಅದರ ಗುರುತು ಸಿಗುತ್ತದೆ. ಉತ್ತರ ಕರ್ನಾಟಕದಲ್ಲಿ ಹುಟ್ಟಿದ ಈ ಕಲೆ ಇಂದು ದಕ್ಷಿಣ ಕನ್ನಡ ಭಾಗಗಳಲ್ಲಿ ಹೆಚ್ಚು ಪ್ರಚಲಿತವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಮತ್ತಷ್ಟು ಬೆಳೆಯಬೇಕು ಎಂದು ಅವರು ಹೇಳಿದರು.

ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ಗಮಕ ಎಂದರೆ ಕವನಗಳನ್ನು ರಾಗದೊಂದಿಗೆ ಹಾಡುವುದು. ಗಮಕೀಯ ಶೈಲಿ ಕೇಳುವುದೇ ಒಂದು ಆನಂದಕರ ಅನುಭವವಾಗಿದ್ದು, ಪ್ರತಿಯೊಬ್ಬರೂ ಮಾತೃಭಾಷೆಯ ಮೇಲೆ ಪ್ರೀತಿ ಬೆಳೆಸಿ, ಮಕ್ಕಳಿಗೆ ಗಮಕ ಕಲಿಸುವ ಮೂಲಕ ಈ ಪರಂಪರೆಯನ್ನು ಉಳಿಸಬೇಕು ಎಂದು ಕರೆ ನೀಡಿದರು.

ತಾಲೂಕು ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗರುಡಾದ್ರಿ ಕಲಾ ಮಂದಿರ ಹಾಗೂ ಕನ್ನಡ ಸಾಹಿತ್ಯ ಸಂಘದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ ಕೀರ್ತಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಮುಖ್ಯೋಪಾಧ್ಯಾಯ ಶ್ರೀಕಾಂತ ಮಾರ್ಗಲ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ದೊಡ್ಡ ಮಲ್ಲಿಕಾರ್ಜುನ ಹುದ್ದಾರ ಉಪಸ್ಥಿತರಿದ್ದರು. ಸಾಹಿತಿ ಪಾರ್ವತಿ ದೇಸಾಯಿ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ವಿಶ್ವಪೂರ್ವ ಸತ್ಯಂಪೇಟೆ ಆಶಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಸಾಧಕರಾದ ದೇವಿಂದ್ರಪ್ಪ ಭೋವಿ, ಭೀಮರಾಯ ಗೋನಾಳ, ವಾಣಿಶ್ರೀ ಮತ್ತು ಗಾಯತ್ರಿ ಕೊಂಗಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಬೀಲಾಲ್ ಮಕನದಾರ್, ಸಜ್ಜನಕುಮಾರ ಕಲ್ಯಾಣಶೆಟ್ಟಿ, ಚಂದ್ರಕಾಂತ ಮಾರ್ಗಲ್, ವಸಂತಕುಮಾರ ಬಣಗಾರ, ಮೊಹಮ್ಮದ್ ಇಸಾಕ್, ರಾಜು ಪುಲ್ಸೆ, ದತ್ತಾತ್ರೇಯ ಜಹಗೀರದಾರ್, ವೆಂಕಟೇಶ್ವರ ಸುರಪುರಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಶ್ರೀಹರಿರಾವ್ ಆದೋನಿ ಗಮಕ ವಾಚನ ಮಾಡಿದರು. ದೀಪಿಕಾ ಹುದ್ದಾರ ಪ್ರಾರ್ಥನೆಗೀತೆ ಹಾಡಿದರು. ನಿಂಗಣ್ಣ ಗೋನಾಳ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ಶಿವಕುಮಾರ ಕಮತಗಿ ವಂದಿಸಿದರು.
“ಕಾಲೇಜು ವಿದ್ಯಾರ್ಥಿಗಳಿಗೆ ಗಮಕ ಪರಿಚಯಿಸಲು ಶಿಬಿರಗಳು ಮತ್ತು ಸಮ್ಮೇಳನಗಳನ್ನು ಆಯೋಜಿಸಬೇಕು. ಗಮಕದ ಅಭಿವೃದ್ಧಿಗೆ ಜಿಲ್ಲಾಧ್ಯಕ್ಷ ಶ್ರೀನಿವಾಸ ಜಾಲವಾದಿಯವರ ಕಾರ್ಯ ಶ್ಲಾಘನೀಯ.”
— ಲಕ್ಷ್ಮೀಕಾಂತ ಮೊಹರೀರ್

