ಸುರಪುರ ತಹಸೀಲ್ದಾರ್ ಕಚೇರಿಯಲ್ಲಿ ಭಕ್ತಿ ಭಾವದಿಂದ ಮಹಾವೀರ ಜಯಂತಿ ಆಚರಣೆ|ಅಹಿಂಸೆಯ ದಾರಿಯಲ್ಲಿ ನಡೆಯೋಣ;H.A.ಸರಕಾವಸ್


ಸುರಪುರ ಟೈಮ್ಸ್ ವಾರ್ತೆ

ಸುರಪುರ:ಅಹಿಂಸಾ ಧರ್ಮವನ್ನು ಜಗತ್ತಿಗೆ ಸಾರಿದ ಭಗವಾನ್ ಮಹಾವೀರರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ಹೆಚ್.ಎ. ಸರಕಾವಸ್ ಹೇಳಿದರು.
ನಗರದ ಪ್ರಜಾಸೌಧದಲ್ಲಿರುವ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತಿ, ಅಹಿಂಸೆ ಮತ್ತು ಸತ್ಯದ ಸಂದೇಶಗಳನ್ನು ಜಗತ್ತಿಗೆ ಬೋಧಿಸಿದ ಮಹಾವೀರರ ಉಪದೇಶಗಳು ಎಲ್ಲ ಕಾಲಕ್ಕೂ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.


“ಅಹಿಂಸಾ ಪರಮೋ ಧರ್ಮಃ” ಎಂಬ ಮಹತ್ವದ ಸಂದೇಶವನ್ನು ಉಲ್ಲೇಖಿಸಿದ ಅವರು, ಹಿಂಸೆಯನ್ನು ತ್ಯಜಿಸುವುದೇ ಅತ್ಯುತ್ತಮ ಧರ್ಮವಾಗಿದ್ದು, ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅವಶ್ಯಕ ಎಂದರು. ಮಹಾವೀರರ ಆದರ್ಶಗಳನ್ನು ಅನುಸರಿಸುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆದು ನೆಮ್ಮದಿ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಾವೀರ ಜಯಂತಿ ನಮಗೆ ಪ್ರೀತಿ, ದಯೆ, ಸಹನೆ ಮತ್ತು ಅಹಿಂಸೆಯ ಜೀವನವನ್ನು ಅನುಸರಿಸಲು ಪ್ರೇರೇಪಿಸುವ ಪವಿತ್ರ ದಿನವಾಗಿದ್ದು, ಅವರು ತೋರಿದ ಸನ್ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೈನ್ ಮಂದಿರದ ಅರ್ಚಕ ತೀರ್ಥ ಗುರೂಜಿ, ಜೈನ್ ಸಮುದಾಯದ ಮುಖಂಡರಾದ ಅಮೃತಲಾಲ್ ಜೈನ್, ರಾಯಚಂದ ಜೈನ್, ಪ್ರಕಾಶಚಂದ ಜೈನ್, ಕಾಂತಿಲಾಲ್ ಜೈನ್, ವಿಕ್ರಮ ಜೈನ್, ರಾಹುಲ್ ಜೈನ್, ಶಿರಸ್ತೇದಾರ್ ಬಸಲಿಂಗಪ್ಪ ಪಾಟೀಲ್, ಕಂದಾಯ ಇಲಾಖೆಯ ಅಶೋಕ ಸೊನ್ನದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ವಿಶೇಷ ಪೂಜೆ, ಭಜನೆ ಗೀತೆಗಳು ನೆರವೇರಿದವು. “ಬೋಲೋ ಮಹಾವೀರ ಭಗವಾನ್ ಕಿ ಜೈ” ಎಂಬ ಘೋಷಣೆಗಳೊಂದಿಗೆ ಕಾರ್ಯಕ್ರಮ ಭಕ್ತಿಭಾವದಿಂದ ಕಂಗೊಳಿಸಿತು.

Leave a Reply

Your email address will not be published. Required fields are marked *

error: Content is protected !!