ಕೃಷಿ ಹೊಂಡ ದುರಂತ: ನಗನೂರು ಗ್ರಾಮಕ್ಕೆ ಸಚಿವ ದರ್ಶನಾಪುರ ಭೇಟಿ – ಮೃತ ಕುಟುಂಬಗಳಿಗೆ ಸಾಂತ್ವನ, ₹1 ಲಕ್ಷ ಸಹಾಯ.
ಸುರಪುರ ಟೈಮ್ಸ್ ವಾರ್ತೆ
ಕೆಂಭಾವಿ: ನಿನ್ನೆ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ಮಕ್ಕಳು ದುರ್ಘಟನೆಯಲ್ಲಿ ಮೃತಪಟ್ಟ ಹಿನ್ನೆಲೆ, ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮಕ್ಕೆ ಜಿಲ್ಲಾಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಇಂದು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಘಟನೆಯಿಂದ ಶೋಕಸಂತಪ್ತವಾಗಿರುವ ಮೃತ ಮಕ್ಕಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಚಿವರು, ಅವರ ದುಃಖದಲ್ಲಿ ಭಾಗಿಯಾಗಿದ್ದು, ಸಾಂತ್ವನದ ಮಾತುಗಳನ್ನಾಡಿದರು. ಈ ವೇಳೆ ಮಕ್ಕಳನ್ನು ನೆನೆದು ಕುಟುಂಬಸ್ಥರು ಭಾವುಕರಾಗಿ ಕಣ್ಣೀರು ಹಾಕಿದ ಮನಕಲಕುವ ದೃಶ್ಯಗಳು ಕಂಡುಬಂದವು.


ದುರ್ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ತಕ್ಷಣದ ನೆರವಿನ ರೂಪದಲ್ಲಿ ಸಚಿವರು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ ₹1 ಲಕ್ಷ ಆರ್ಥಿಕ ಸಹಾಯ ನೀಡಿದರು. ಅಲ್ಲದೆ, ಸರ್ಕಾರದ ವತಿಯಿಂದ ಇನ್ನಷ್ಟು ಸೂಕ್ತ ಪರಿಹಾರವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ರೀತಿಯ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು, ಕೃಷಿ ಹೊಂಡಗಳ ಸುರಕ್ಷತೆ ಕುರಿತು ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕೂಡ ಘಟನೆ ಬಗ್ಗೆ ವಿವರ ನೀಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.



