🚨 BIG BREAKING:| ಜಮೀನಿನ ದಾರಿ ವಿಚಾರದಲ್ಲಿ ಕುಟುಂಬ ಗಲಾಟೆ – ಯುವಕನ ಹತ್ಯೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಜಮೀನಿನ ದಾರಿ ವಿಚಾರವಾಗಿ ಕುಟುಂಬದೊಳಗಿನ ಗಲಾಟೆ ಭೀಕರ ತಿರುವು ಪಡೆದು, ಒಬ್ಬ ಯುವಕನ ಹತ್ಯೆಯಾಗಿ ಅಂತ್ಯಗೊಂಡ ದುರ್ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಪರಮೇಶಿ ತಂದೆ ಮಲ್ಲಣ್ಣ ಗಿಂಡಿ (27) ಎಂದು ಗುರುತಿಸಲಾಗಿದೆ. ಜಮೀನಿನ ದಾರಿ ವಿಚಾರವಾಗಿ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ವೈಷಮ್ಯ ಕ್ಷುಲ್ಲಕ ಗಲಾಟೆಗೆ ಕಾರಣವಾಗಿ, ನಂತರ ಹಲ್ಲೆ ಮಟ್ಟಕ್ಕೆ ತಲುಪಿದೆ. ಮಾರಕಾಸ್ತ್ರಗಳನ್ನು ಬಳಸಿಕೊಂಡು ಆರೋಪಿಗಳು ಪರಮೇಶಿ ಮೇಲೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ಮೃತನ ತಮ್ಮನಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕೆಂಭಾವಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಈ ಘಟನೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಕಟ್ಟುಕಟ್ಟಿದ್ದಾರೆ.

