ಜನಗಣತಿ ಕಾರ್ಯಕ್ಕೆ ಗ್ರೀನ್ ಸಿಗ್ನಲ್: ಸ್ವಯಂ-ಗಣತಿ ಪ್ರಕ್ರಿಯೆ ಇಂದಿನಿಂದ ಶುರು;H.A.ಸರಕವಾಸ್

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಜನಗಣತಿ-2027 ಕಾರ್ಯವನ್ನು ತಾಲೂಕಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇಂದಿನಿಂದ ಸ್ವಯಂ-ಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಹಸೀಲ್ದಾರ್ ಹೆಚ್.ಎ. ಸರಕವಾಸ್ ತಿಳಿಸಿದ್ದಾರೆ.
ಇಲ್ಲಿನ ಪ್ರಜಾಸೌಧದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಎರಡು ಹಂತಗಳಲ್ಲಿ ಜನಗಣತಿ ನಡೆಸಲು ಅಧಿಸೂಚನೆ ಹೊರಡಿಸಿದೆ ಎಂದು ವಿವರಿಸಿದರು. ಅದರನ್ವಯ, ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಗಣತಿ ನಡೆಯಲಿದ್ದು, ಏಪ್ರಿಲ್ 16ರಿಂದ ಮೇ 15ರವರೆಗೆ ಮನೆಮನೆಗೆ ಭೇಟಿ ನೀಡಿ ಗಣತಿ ಕಾರ್ಯ ನಡೆಯಲಿದೆ. 2027ರಲ್ಲಿ ಎರಡನೇ ಹಂತದ ಜನಗಣತಿ ನಡೆಯಲಿದೆ ಎಂದರು.


ಸ್ವಯಂ-ಗಣತಿ ಅವಧಿಯಲ್ಲಿ ಜನರು ತಮ್ಮ ವಿವರಗಳನ್ನು ಜನಗಣತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಭರ್ತಿ ಮಾಡಿಕೊಳ್ಳಬೇಕು. ಮೊಬೈಲ್ ಮತ್ತು OTP ಬಳಸಿ ಲಾಗಿನ್ ಆಗಿ, ತಮ್ಮ ಸ್ಥಳವನ್ನು ಆಯ್ಕೆ ಮಾಡಿ, ನಕ್ಷೆಯಲ್ಲಿ ಮನೆ ಗುರುತಿಸಿ, ಕುಟುಂಬದ ವಿವರಗಳನ್ನು ನಮೂದಿಸಿ ಸಲ್ಲಿಸಬೇಕು. ಬಳಿಕ ಲಭ್ಯವಾಗುವ ಎಸ್‌ಇ ರೆಫರೆನ್ಸ್ ಐಡಿಯನ್ನು ಗಣತಿದಾರರಿಗೆ ಹಂಚಿಕೊಳ್ಳುವ ಮೂಲಕ ಅಂತಿಮ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಈ ವಿಧಾನದಿಂದ ವೇಗವಾಗಿ ದತ್ತಾಂಶ ಸಂಗ್ರಹಣೆ ಸಾಧ್ಯವಾಗುತ್ತದೆ. ಪೂರ್ವಭಾವಿಯಾಗಿ ಮಾಹಿತಿ ಭರ್ತಿ ಮಾಡುವುದರಿಂದ ಕ್ಷೇತ್ರ ಮಟ್ಟದ ಗಣತಿ ಸಮಯ ಕಡಿಮೆಯಾಗುತ್ತದೆ ಹಾಗೂ 2027ರ ಜನಗಣತಿಯ ಆಧುನೀಕರಣ ಗುರಿಗಳಿಗೆ ಇದು ಸಹಕಾರಿ ಎಂದು ಅವರು ಹೇಳಿದರು.
ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ತಮ್ಮ ವ್ಯಾಪ್ತಿಯ ಬ್ಲಾಕ್‌ಗಳಲ್ಲಿ ಮನೆಮನೆಗೆ ಭೇಟಿ ನೀಡಿ ನಿಗದಿತ 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಕಾರ್ಯಕ್ಕಾಗಿ 526 ಗಣತಿದಾರರು ಹಾಗೂ 90 ಮೇಲ್ವಿಚಾರಕರು ನೇಮಕಗೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ತಹಸೀಲ್ದಾರ್, ನಗರ ಪ್ರದೇಶದಲ್ಲಿ ಪೌರಾಯುಕ್ತರು ಹಾಗೂ ಕಕ್ಕೇರಾ ಮತ್ತು ಕೆಂಭಾವಿ ಪುರಸಭೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಫ್‌ಡಿಎ ಗುರುಬಸಪ್ಪ ಪಾಟೀಲ್ ಹಾಗೂ ತಾಂತ್ರಿಕ ಸಹಾಯಕ ಭೀಮರಾಯ್ ಯಾದವ ಉಪಸ್ಥಿತರಿದ್ದರು.


ಜನಗಣತಿ-2027 ಮಹತ್ವ
ಜನಗಣತಿ-2027 ದೇಶದ ಅತಿ ದೊಡ್ಡ ಸಾರ್ವಜನಿಕ ಭಾಗವಹಿಸುವಿಕೆಯ ಅಭಿಯಾನವಾಗಿದ್ದು, ಇದು ಕೇವಲ ಜನರ ಎಣಿಕೆ ಮಾತ್ರವಲ್ಲ—ವಿಕಸಿತ ಭಾರತ 2047ರ ಬಲಿಷ್ಠ ಅಡಿಪಾಯವಾಗಿದೆ. 1881ರಲ್ಲಿ ದೇಶದಲ್ಲಿ ಮೊದಲ ಜನಗಣತಿ ನಡೆದಿದ್ದು, ಇದು 16ನೇ ಜನಗಣತಿ ಹಾಗೂ ಸ್ವಾತಂತ್ರ್ಯಾನಂತರದ 8ನೇ ಗಣತಿಯಾಗಿದೆ.
ನಿಖರ ದತ್ತಾಂಶವು ಭವಿಷ್ಯದ ನೀತಿಗಳ ರೂಪಣೆಗೆ ಸಹಕಾರಿ. ಸಂಪನ್ಮೂಲಗಳ ಸಮರ್ಪಕ ಹಂಚಿಕೆ, ಸೂಕ್ತ ಸ್ಥಳಗಳಲ್ಲಿ ಯೋಜನೆಗಳ ಅನುಷ್ಠಾನ, ಉತ್ತಮ ಶಾಲೆಗಳು, ಆಸ್ಪತ್ರೆಗಳು ಮತ್ತು ರಸ್ತೆ ಅಭಿವೃದ್ಧಿಗೆ ಜನಗಣತಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಹಸೀಲ್ದಾರ್ ಹೆಚ್.ಎ. ಸರಕವಾಸ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!