ನೀರಿಲ್ಲದೆ ನರಳಿದ ಜನ: ಖಾಲಿ ಕೊಡಗಳೊಂದಿಗೆ ಬೀದಿಗಿಳಿದ ಮಹಿಳೆಯರು!|ಮೂಲಭೂತ ಸೌಲಭ್ಯಗಳ ಕೊರತೆಗೆ ಆಕ್ರೋಶ – ಪಂಚಾಯತ್‌ಗೆ ಬೀಗ ಜಡಿಸುವ ಎಚ್ಚರಿಕೆ.
ಸುರಪುರ ಟೈಮ್ಸ್ ವಾರ್ತೆ
ಗುರುಗುಂಟಾ: ಕುಡಿಯುವ ನೀರಿನ ಅಭಾವದಿಂದ ಬೇಸತ್ತ ಗುರುಗುಂಟಾ ಗ್ರಾಮದ 7ನೇ ವಾರ್ಡಿನ ಹಾಲಭಾವಿ ಓಣಿಯ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು ಹಾಗೂ ವಾರ್ಡಿನಲ್ಲಿ ಚರಂಡಿ, ರಸ್ತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಮಹಿಳೆಯರು ಮತ್ತು ಸಾರ್ವಜನಿಕರು ಒತ್ತಾಯಿಸಿದರು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗದಿದ್ದರೆ ಪಂಚಾಯತ್ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು ಹಾಲಭಾವಿ ಓಣಿಯ ನಿವಾಸಿಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸಿ.ಸಿ. ರಸ್ತೆಗಳು, ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯಗಳು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಬೀದಿ ದೀಪಗಳಂತಹ ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ತಮ್ಮ ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮೇಲಾಧಿಕಾರಿಗಳು ತಕ್ಷಣ ವಾರ್ಡಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಶಿವಸೇನೆ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತ ಅಂಬಿಗೇರ್ ಮಾತನಾಡಿ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಾರ್ಡ್ ನಿವಾಸಿಗಳಾದ ಶಿವು ಅಡಿಕೇರ್, ರಮೇಶ್ ನಾಯಕ್, ಅಕ್ಷಯನಾಯಕ್, ವೀರೇಶ್, ರೇಣುಕಾ, ಗದ್ದೆಮ್ಮ, ಈರಮ್ಮ, ಮದ್ದೆಮ್ಮ, ನಾಗಮ್ಮ, ದುರುಗಮ್ಮ, ಶಿವಮ್ಮ, ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.


