“BREAKING NEWS” ಜಮೀನಿನ ವಿಚಾರಕ್ಕೆ ಸಂಬಂಧಿ ಕೊಲೆ ಪ್ರಕರಣ |ಆರೋಪಿಗಳ ಬಂಧನದ ನಂತರ ಮನೆಗೆ ಬೆಂಕಿ ಹಚ್ಚಿದ ಘಟನೆ | ಪೊಲೀಸರಿಂದ ಪ್ರತ್ಯೇಕ ಪ್ರಕರಣ ದಾಖಲು.

ಸುರಪುರ ಟೈಮ್ಸ್ ವಾರ್ತೆ
ಕೆಂಭಾವಿ;ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಉಂಟಾದ ಜಗಳವು ಭೀಕರ ಕೊಲೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಬಳಿಕ ಆರೋಪಿಗಳ ಮನೆಗೆ ಬೆಂಕಿ ಹಚ್ಚಿರುವುದು ಗ್ರಾಮದಲ್ಲಿ ಆತಂಕ ಮತ್ತು ಉದ್ವಿಗ್ನತೆಯನ್ನುಂಟುಮಾಡಿದೆ.


ಮಾಹಿತಿಯ ಪ್ರಕಾರ, ಕಳೆದ ಮಾರ್ಚ್ 30ರಂದು ಎರಡು ಎಕರೆ ಜಮೀನಿನ ವಿಚಾರವಾಗಿ ಹನುಮಂತರಾಯ ಹಾಗೂ ಅವರ ಮಕ್ಕಳೊಂದಿಗೆ ನಡೆದ ವಾಗ್ವಾದವು ಹಿಂಸಾತ್ಮಕವಾಗಿ ತಿರುಗಿ, ಹನುಮಂತರಾಯನ ಸಹೋದರನ ಮಗ ಪರಮೇಶ್ ಗಿಂಡಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


ಘಟನೆ ಬಳಿಕ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಹನುಮಂತರಾಯ ಮತ್ತು ಅವರ ಮಕ್ಕಳನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳ ಬಂಧನದ ನಂತರ ಅಪರಿಚಿತ ಕಿಡಿಗೇಡಿಗಳು ಅವರ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಪ್ರಾಥಮಿಕ ಶಂಕೆಯಂತೆ, ಕೊಲೆಯಾದ ಪರಮೇಶ್ ಕುಟುಂಬಸ್ಥರೇ ಆಕ್ರೋಶದಿಂದ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.


ಘಟನಾ ಸ್ಥಳಕ್ಕೆ ಕೆಂಭಾವಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆ ಹಾಗೂ ಬೆಂಕಿ ಹಚ್ಚಿದ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!