ಏ.10 ರವರೆಗೆ ಕಾಲುವೆಗೆ ನೀರಿಗಾಗಿ ರಸ್ತೆಗಿಳಿದ ಭೂತಾಯಿ ಮಕ್ಕಳು|ಇವರ ಹೋರಾಟಕ್ಕೆ ಸಾಮೂಹಿಕ ಸಂಘಟನೆಗಳ ಸಾಥ್ | ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಬಂದ್, ಸುಡು ಬಿಸಿಲು ಲೆಕ್ಕಿಸದೆ ಸತತ ನಾಲ್ಕು ತಾಸು ಬಿರುಸಿನ ಪ್ರತಿಭಟನೆ !
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ಜಿಲ್ಲಾ ಸಮಿತಿಯವರು ಸಮೀಪದ ಹಸನಾಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಮಂಗಳವಾರ ಸತತ ನಾಲ್ಕು ಗಂಟೆಗಳ ವರೆಗೆ ಸುಡು ಬಿಸಿಲನ್ನು ಲೆಕ್ಕಿಸದೆ ರಸ್ತೆ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಹಸನಾಪುರ ವೃತ್ತದ ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಮೇಲೆ ಬೆಳಗ್ಗೆ 10.30ಗಂಟೆಗೆ ಕುಳಿತು ಧರಣಿ ನಡೆಸಿದರು. ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಘೋಷಣೆ ಕೂಗಿದರು. ಬೇಕೆ ಬೇಕು ಏ.10 ರವರೆಗೆ ಕಾಲುವೆಗೆ ನೀರು ಬೇಕು…ಎಂಬ ಘೋಷಣೆ ಮೊಳಗಿತು. ಬಳಿಕ ಪ್ರತಿಭಟನೆಯಲ್ಲಿ ರೈತ ಮುಖಂಡರು ಮಾತನಾಡಿ, ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ಹುಣಸಗಿ, ಸುರಪುರ, ಶಹಾಪುರ, ವಡಗೇರಾ ತಾಲೂಕುಗಳ ರೈತರ ಶೇಂಗಾ, ಸಜ್ಜೆ, ಸೂರ್ಯಕಾಂತಿ, ಭತ್ತ ಸೇರಿ ಇನ್ನಿತರ ಬೆಳೆಗಳು ಇನ್ನೂ ೨೦-೨೫ ದಿನಗಳಲ್ಲಿ ಕೈಗೆ ಬರುತ್ತವೆ. ಆದರೆ ತೆನೆ ಬರುವ ಸಂದರ್ಭದಲ್ಲಿ ಏಕಾಏಕಿ ಕಾಲುವೆ ನೀರು ನಿಂತು ಹೋದರೆ ರೈತರ ಲಕ್ಷಾಂತರ ಮೊತ್ತದ ಬೆಳೆ ನಷ್ಟವಾಗಿ ಅವರ ಬಾಳು ಕೂಡ ಹಾಳಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆಯು ಬೆಳೆಗಳ ವಾಸ್ತವ ಸ್ಥಿತಿಯನ್ನು ಸರಕಾರಕ್ಕೆ ವರದಿ ಮಾಡಿದೆ. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಸಂಗ್ರಹವಿದ್ದ ಅದೇಷ್ಟೋ ಟಿಎಂಸಿ ನೀರು ನದಿಗೆ ಹೋಗಿದೆ ಎಂದು ಆಕ್ರೋಶ ಹೊರ ಹಾಕಿದರು. ನೀರಾವರಿ ಸಲಹಾ ಸಮಿತಿಯವರ ಅವೈಜ್ಞಾನಿಕ ತಿರ್ಮಾನ, ತೆಲಂಗಾಣ ರಾಜ್ಯಕ್ಕೆ ರಾತೋರಾತ್ರಿ ನೀರು ಹರಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹರಿ ಹಾಯ್ದರು.
ಏ.10 ರವರೆಗೆ ಕಾಲುವೆಗೆ ನೀರು ಹರಿಸದಿದ್ದರೆ ರೈತರು ಬೆಳೆ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರಕಾರವೇ ಜವಾಬ್ದಾರಿಯಾಗುತ್ತದೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕಾರಣ ಸರಕಾರ ರೈತರ ಹಿತ ಕಾಪಾಡಬೇಕಾಗಿರುವುದು ಅಗತ್ಯವಾಗಿದೆ. ರೈತರಿಗೆ ಈಗ ರೈತರಿಗೆ ಬಂದಿರುವ ಸಂಕಷ್ಟ ನಿವಾರಿಸಬೇಕು. ಕುಡಿಯಲು ಅವಶ್ಯವಿರುವ 20 ಟಿಎಂಸಿ ನೀರು ಇಟ್ಟುಕೊಂಡು ಇನ್ನುಳಿದ ೪.೫ ಟಿಎಂಸಿ ಹೆಚ್ಚುವರಿ ನೀರು ಹಾಗೂ ಕೊಯ್ನಾ ಡ್ಯಾಂನಿಂದ 4 ಟಿಎಂಸಿ ನೀರು ಸೇರಿಸಿ ಏ.10 ವರೆಗೆ ಕಾಲುವೆಗೆ ನೀರು ಹರಿಸಿ ರೈತರ ಬೆಳೆ, ಬಾಳು ಉಳಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶರಣಪ್ಪ ಕೊಟೇಪ್ಪಗೌಡ ಅವರಿಗೆ ಸಲ್ಲಿಸಲಾಯಿತು. ಲಕ್ಷ್ಮೀಪುರ ಶ್ರೀಗಿರಿ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ್, ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ,
ದಸಂಸ(ಕ್ರಾಂತಿಕಾರಿ) ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕ್ರಾಂತಿ, ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ, ರೈತ ಮುಖಂಡರಾದ ಮುದ್ದಣ್ಣ ಅಮ್ಮಾಪುರ ಕಕ್ಕೇರಾ, ಸೋಮಶೇಖರ ಶಾಬಾದಿ, ಬುಚ್ಚಪ್ಪ ನಾಯಕ, ಮಲ್ಕಣ್ಣ ಚಿಂತಿ, ಪಾರಪ್ಪ ಗುತ್ತೇದಾರ್, ಶಿವರಾಜ ಕಲಕೇರಿ, ಭೀಮಾಶಂಕರ ಬಿಲ್ಲವ್, ರಾಮಯ್ಯ ಅಲ್ಹಾಳ, ಬಸವರಾಜ ದೊಡ್ಡಮನಿ, ಭೀಮಣ್ಣ ಪಟ್ಟೇದಾರ, ಧರ್ಮಣ್ಣ ದೊರೆ, ಮಲ್ಲು ಹುಬ್ಬಳಿ ಕುಂಬಾರಪೇಟೆ, ವೀರಭದ್ರಪ್ಪ ತಳವಾರಗೇರಾ, ಸಿದ್ದಣ್ಣ ಗುಡ್ಡಕಾಯಿ, ಶಾಂತಪ್ಪ, ಚನ್ನಪ್ಪ, ಮಾನಪ್ಪಗೌಡ ರತ್ತಾಳ, ರವಿಕುಮಾರ ಹಾದಿಮನಿ, ಪ್ರಕಾಶ, ಶಿವಲಿಂಗಪ್ಪ ಕುರಬರಗಲ್ಲಿ, ರಾಮಣ್ಣ, ಮಾನಪ್ಪ ಶೆಳ್ಳಗಿ, ರವಿಚಂದ್ರ ಬೊಮ್ಮನಳ್ಳಿ ಸೇರಿ ರೈತರು ಇದ್ದರು.
ನೆತ್ತಿ ಸುಡುವ ಬಿಸಿಲು ಲೆಕ್ಕಕ್ಕಿಲ್ಲ !
ಬೆಂಕಿ ಬಿಸಿಲಿನ ಅರ್ಭಟ, 41 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ, ಕಾದ ಬಾಣಲಿಯಂತಾದ ಡಾಂಬರ್ ರಸ್ತೆ, ನೆತ್ತಿ, ಕಾಲು ಸುಡುತ್ತಿವೆ, ಬೆವರಿನ ಸ್ನಾನ, ಗಂಟಲು ಒಣಗಿದೆ, ಕಣ್ಣು ಕೆಂಪಾಗಿವೆ ಇದ್ಯಾವುದು ಲೆಕ್ಕಕ್ಕಿಲ್ಲ. ಕಾಲುವೆಗೆ ನೀರು ಹರಿಸಬೇಕು. ನಮ್ಮ ರೈತರ ಜೀವ ಉಳಿಯಬೇಕು. ನಮ್ಮ ಜೀವ ಇಲ್ಲಿಯೇ ಹೋದರು ಸರಿ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸತತ ನಾಲ್ಕು ಗಂಟೆಗಳವರೆಗೆ ರೈತ ಮುಖಂಡರು, ನೂರಾರು ರೈತರು ಹಸನಾಪುರ ವೃತ್ತದಲ್ಲಿ ನಡೆಸಿದ ಕಠಿಣ ಹೋರಾಟದ ಘಟನೆಗಳು ಗಮನಸೆಳೆದವು. ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಬೇಕು. ಪ್ರಾದೇಶಿಕ ಆಯುಕ್ತರಿಗೆ ವಾಸ್ತವ ಸ್ಥಿತಿ ಮನವರಿಕೆ ಮಾಡಿ ಕಾಲುವೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದ ಘಟನೆಯೂ ಜರುಗಿತು. ಅಧಿಕಾರಿಗಳು ಯಾವುದೇ ಭರವಸೆ ನೀಡದೆ ಮನವಿ ಪತ್ರ ಮಾತ್ರ ಸ್ವೀಕರಿಸಿ ಹೋದುದಕ್ಕೆ ಅಸಮಾಧಾನ ವ್ಯಕ್ತವಾಯಿತು. ರಸ್ತೆ ಸಂಚಾರ ತಡೆಯಿಂದಾಗಿ ಸತತ ನಾಲ್ಕು ಗಂಟೆ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು, ವಾಹನ ಸವಾರರು ಪರದಾಡಿದರು ಅವರ ಗೋಳು ಹೇಳತೀರದಾಗಿತ್ತು.
ಹೆಣಗಳು ಬೀಳುತ್ತವೆ, ಸರಕಾರವೇ ಹೊಣೆ !
ಕಾಲುವೆಗೆ ನೀರು ಹರಿಸದಿದ್ದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಹೆಣಗಳು ಬೀಳುತ್ತವೆ ಸರಕಾರವೇ ಇದಕ್ಕೆ ಹೊಣೆ. ಯಾವ ಪಕ್ಷಗಳು ಇಂದು ರೈತರ ಪರ ಇಲ್ಲವಾಗಿವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಎರಡು ನದಿಗಳು ತುಂಬಿ ಹರಿದು ಹೋಗುತ್ತವೆ ಆದರೆ ನಮ್ಮ ಭೂಮಿಗೆ ನೀರು ಇಲ್ಲದಂತಹ ಪರಿಸ್ಥಿತಿ ಸರಕಾರಗಳು ಮಾಡಿಟ್ಟಿವೆ. ನಮ್ಮಲ್ಲಿ ಹೋರಾಟದ ಕಿಚ್ಚು ಬರಬೇಕು, ಯುವಕರು ಸಿದ್ಧವಾಗಬೇಕು, ನಮ್ಮ ಹೋರಾಟ ಸರಕಾರದ ಕಣ್ತೆರಿಸಬೇಕು. ಯಾವುದಕ್ಕೂ ಎದೆಗುಂದಬಾರದು. ನಮ್ಮ ರೈತರ ಬದುಕು ಉಳಿಸಬೇಕು ಎಂದು ರೈತ ಮುಖಂಡರು ಹೋರಾಟದಲ್ಲಿ ತಿಳಿಸಿದರು.
ನಾನು ರೈತನ ಮಗನಾಗಿ ಬಂದಿರುವೆ
ನಾನು ಒಂದು ಸಂಸ್ಥಾನ ಮಠದ ಶಿವಾಚಾರ್ಯನಾಗಿ ಈ ಹೋರಾಟಕ್ಕೆ ಇಲ್ಲಿಗೆ ಬಂದಿಲ್ಲ. ಒಬ್ಬ ರೈತನ ಮಗನಾಗಿ ಬಂದಿರುವೆ. ಸಮಯ ಬಂದರೆ ರೈತರಿಗೋಸ್ಕರ ಪ್ರಾಣ ಕೊಡಲು ನಾನು ಸಿದ್ಧ. ರಾಜ್ಯ ಸರಕಾರ ರೈತರಿಗೆ ನೀರು, ವಿದ್ಯುತ್, ಗೊಬ್ಬರ, ಕ್ರಿಮಿನಾಶಕ ಸರಿಯಾಗಿ ಕೊಟ್ಟದ್ದೆಯಾದರೆ ರೈತರ ಬದುಕು ಹಸನವಾಗುತ್ತದೆ. ಈ ಬಾರಿ ಮಳೆಯಾಗಿದೆ, ಡ್ಯಾಂನಲ್ಲಿ ಸಾಕಷ್ಟು ನೀರಿದ್ದರು ಹೋರಾಟ ಮಾಡುವ ದುಸ್ಥಿತಿ ಬಂದಿದೆ. ಸರಕಾರ ಏ.೧೦ ರವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳ್ಳುತ್ತದೆ ಎಂದು ಶ್ರೀಗಿರಿ ಸಂಸ್ಥಾನ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಎಚ್ಚರಿಸಿದರು.




