ಕಾಲುವೆಗಳಿಗೆ ನೀರು ಹರಿಸಲು ಸಹಕರಿಸಿದ ಮುಖ್ಯಮಂತ್ರಿ , ಉಪ ಮುಖ್ಯಮಂತ್ರಿ , ಸಲಹಾ ಸಮಿತಿ ಅಧ್ಯಕ್ಷರಿಗೆ ಶಾಸಕ ಆರ್‌ವಿಎನ್ ಕೃತಜ್ಞತೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಾರಾಯಣಪುರ ಬಸವಸಾಗರ ಜಲಾಶಯದಿಂದ ಕಾಲುವೆ ಜಾಲಗಳಿಗೆ ಏ.5,6,7, ಮೂರು ದಿನಗಳವರೆಗೂ ನೀರು ಹರಿಸಲು ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅವರಿಗೆ ನಾನು ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ನೇತೃತ್ವದಲ್ಲಿ ನಾನು ಮತ್ತು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರನ್ನು ಭೇಟಿಯಾಗಿ ಬೆಳೆಗಳಿಗೆ ನೀರು ಅಗತ್ಯವಾಗಿದ್ದು ಕಾಲುವೆಗಳಿಗೆ ನೀರು ಬಿಡಿಸಬೇಕು ಎಂದು ಸತತವಾಗಿ ಮನವಿ ಮಾಡಿಕೊಂಡಿದ್ದೇವು. ನಮ್ಮ ಸರಕಾರವು ಮೂರು ದಿನಗಳವರೆಗೆ ಕಾಲುವೆ ನೀರು ಹರಿಸುವಂತೆ ಆದೇಶಿಸಿ ರೈತರ ಕಷ್ಟಕ್ಕೆ ಸ್ಪಂದಿಸಿದೆ ಎಂದರು.
ಕಾಲುವೆ ನೀರಿನ ವಿಷಯದಲ್ಲಿ ಕೆಲವರು ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಟೇಬಲ್ ಗುದ್ದಿ ನೀರು ಬಿಡಿಸಿಕೊಳ್ಳಬೇಕು ಎನ್ನುವವರು ತಾವು ಎಷ್ಟು ಬಾರಿ ಟೇಬಲ್ ಗುದ್ದಿ ನೀರು ಕೊಡಿಸಿದ್ದಾರೆ ಎಂದು ಪ್ರಶ್ನೀಸಿದರು. ಅವರು ಟೇಬಲ್ ಸನ್ನಿಹದಲ್ಲಿಯೇ ಹೋಗಿಲ್ಲ ಈಗ ರೈತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.  ಈ ಹಿಂದೆ  ನೀರಾವರಿ ಸಲಹಾ ಸಮಿತಿ ಸಭೆ ಕೂಡಾ ಆಗಿರಲಿಲ್ಲ. ನಾಟಿ ಮಾಡಿ ಎಂದು ರೈತರಿಗೆ ಸಲಹೆ ನೀಡಿದ್ದರು ಆ ವೇಳೆ ನೀರು ಸಿಗದ ಕಾರಣ ರೈತರು ಬೆಳೆ ನಷ್ಟ ಅನುಭವಿಸಿದ್ದರು ಅದನ್ನು ನೆನಪಿಸಿಕೊಂಡರೆ ದುಃಖವಾಗುತ್ತದೆ ಎಂದರು.
ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇತ್ತು ಅದೇ ರೀತಿ ನನಗೂ ಇದೆ. ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡಿದ್ದರು. ನಾವು ಎಲ್ಲರ ಒಳಿತನ್ನು ಬಯಸುತ್ತೇವೆ ಮತ್ತು ಸದಾ ರೈತರ ಪರವಾಗಿ ಇರುತ್ತೇವೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ತಂದೆಯವರು ಯಾವ ರೀತಿ ಸದಾ ರೈತರ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಅದೇ ರೀತಿ ನಾನು ರೈತರ ಸೇವೆ ಮಾಡುವೆ. ಅನ್ನದಾತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಹಗಲು ರಾತ್ರಿಯನ್ನದೇ ರೈತರ ಸೇವೆಗೆ ನಾನು ಸದಾ ಬದ್ಧವಾಗಿರುತ್ತೇನೆ. ನಮ್ಮ ಸರಕಾರ ಸದಾ ರೈತರ ಪರ ಇರುತ್ತದೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಮುಖಂಡರಾದ ಮಲ್ಲಣ್ಣ ಸಾಹುಕಾರ ಮುಧೋಳ, ಭೀಮರಾಯ ಮೂಲಮನಿ, ಅಬ್ದುಲ್ ಗಫಾರ್ ನಗನೂರ, ಮಹಿಬೂಬ್  ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫೋಟೊ :  ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಚಿಮಟ್ಟಿ, ದಂಡಿನ್ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!