ಬಲಿಗಾಗಿ ಕಾಯುತ್ತಿರುವ ಬೋನ್ಹಾಳದ ವಿದ್ಯುತ್ ತಂತಿಗಳು,

ಸುರಪುರ ಟೈಮ್ಸ್ ವಾರ್ತೆ
ಮನವಿ ನೀಡಿದರು ಸ್ಪಂದಿಸದ ಜೆಸ್ಕಾಂ ಅಧಿಕಾರಿಗಳು….
ಸುರಪುರ: ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯವರು ನಾನಾ ವರ್ಷಗಳ ಹಿಂದೆ ಅಳವಡಿಸಿರುವ ವಿದ್ಯುತ್ ಕಂಬಗಳು ಕಿರಿಕಿರಿ ಉಂಟು ಮಾಡುತ್ತಿವೆ. ಮಳೆ, ಬಿರುಗಾಳಿಗೆ ತಂತಿಗಳು ಜೋತು ಬಿದಿದ್ದು, ಮನೆಗಳ ಮೇಲೆ ಕೈಗೆ ನಿಲುಕುವಂತೆ ಹಾದು ಹೋಗಿರುವುದರಿಂದ ಜನತೆ ಭಯದ ನೆರಳಲ್ಲಿ ಬದುಕುವಂತಾಗಿದೆ.
ಸುರಪುರ ತಾಲೂಕಿನ ಬೋನ್ಹಾಳ ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಎದುರಿಸುವಂತಾಗಿದೆ ನಿನ್ನೆ ಜಾಲಿಬೆಂಚಿ ಗ್ರಾಮದಲ್ಲಿ ಇದೇ ರೀತಿಯ ಸಮಸ್ಯೆಯಿಂದ ವಿದ್ಯುತ್ ಅವಘಡ ಸಂಭವಿಸಿದೆ ಗ್ರಾಮಸ್ಥರ ಆರೋಪವಾಗಿದೆ.ಗ್ರಾಮದ ನಾನಾ ಮನೆಗಳ ಮೇಲೆ ಜೋತು ಬಿದ್ದ ವಿದ್ಯುತ್ ತಂತಿಗಳು ಕಂಬಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಬಲಿ ತೆಗೆದುಕೊಳ್ಳವ ಮುನ್ನವೇ ಜೆಸ್ಕಾಂ ಅಧಿಕಾರಿಗಳು ಜಾಗೃತರಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಜೆಸ್ಕಾಂ ಅಧಿಕಾರಿಗಳೇ ಜವಾಬ್ದಾರರು ಎಂದು ಗ್ರಾಮಸ್ಥರು ದೂರಿದ್ದಾರೆ.
ನಿತ್ಯ ಮಕ್ಕಳನ್ನು ಮನೆ ಮೇಲೆ ಬಿಡದಂತೆ ಎಚ್ಚರ ವಹಿಸುವ ಸ್ಥಿತಿ ಪಾಲಕರದ್ದಾಗಿದೆ. ಒಂದಿಲ್ಲೊಂದು ಕೆಲಸಕ್ಕೆ ಮನೆ ಮೇಲೆ ಹೋಗುವ ಮಹಿಳೆಯರು ವಿದ್ಯತ್ ತಂತಿ ತಾಗುವ ಭಯದಿಂದಲೇ ಕೆಲಸ ಮಾಡಬೇಕಿರುವ ಅನಿವಾರ್ಯತೆ ಎದುರಾಗಿದೆ.
ಅಲ್ಲದೆ ಜೋತು ಬಿದ್ದ ವಿದ್ಯುತ್ ತಂತಿಗಳ ಘರ್ಷಣೆಯಿಂದ ನಾನಾ ಅವಘಡಗಳು ಈಗಾಗಲೇ ಸಂಭವಿಸಿದ್ದು, ಕೆಲವಡೆ ವಿದ್ಯುತ್ ತಂತಿಗಳ ನಡುವೆ ಕಟ್ಟಿಗೆಗಳನ್ನು ಕಟ್ಟಲಾಗಿದೆ. ಅಧಿಕಾರಿಗಳು ಕೂಡಲೇ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಿಸಿ ಜೋತು ಬೀಳದಂತೆ ಹೊಸ ತಂತಿಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮನವಿ ಪತ್ರ ನೀಡಿದರು ಸ್ಪಂದಿಸದ ಜೆಸ್ಕಾಂ ಅಧಿಕಾರಿಗಳು
ಹಲವು ಬಾರಿ ಮನವಿ ಮಾಡಿಕೊಂಡರು ಯಾರಬ್ಬರೂ ಈ ಕುರಿತು ಕ್ರಮ ಕೈಗೊಂಡಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ, ಕೆಳಗೆ ಬಾಗಿರುವ, ಮುರಿದಿರುವ ಬಿರುಕು ಬಿಟ್ಟಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಗ್ರಾಮದ ಹಲವು ಸಂಘಗಳು ಪದಾಧಿಕಾರಿಗಳ ಆಗ್ರಹವಾಗಿದೆ.
ಭಯದಲ್ಲೇ ಗ್ರಾಮಸ್ಥರು ಬದುಕು
ಗ್ರಾಮದಲ್ಲಿ ಕೆಲ ಕಂಬಗಳು ಬಿರುಕು ಬಿಟ್ಟಿವೆ, ಕೆಲ ಕಂಬಗಳು ಅರ್ಧದಷ್ಟು ನೆಲಕ್ಕೆ ಬಾಗಿವೆ. ಇನ್ನು ಕೆಲ ಕಂಬಗಳಲ್ಲಿ ಗಾರೆ ಕಿತ್ತುಹೋಗಿ ಕಂಬಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳು ಹೊರ ಬಂದಿವೆ. ಈ ಕಂಬಗಳ ವೈರ್ ಕೂಡ ಜೋತು ಬಿದ್ದಿದ್ದು ಗಾಳಿ ಬೀಸಿದಾಗ ಒಂದಕೊಂದು ಸ್ಪರ್ಶಗೊಂಡು ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಭಯದಲ್ಲೇ ಬದುಕುತ್ತಿದ್ದೇವೆ ಎಂದು ಗ್ರಾಮಸ್ಥರು ಆರೋಪವಾಗಿದೆ.ಕೂಡಲೇ ಜೆಸ್ಕಾಂ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ಮಾಡಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕಂದು ಗ್ರಾಮಸ್ಥರ ಮನವಿಯಾಗಿದೆ.

