ಸುರಪುರ ವಕೀಲರ ಸಂಘದಲ್ಲಿ ಅಂಬೇಡ್ಕರ್ ಜಯಂತಿ

ಫೋಟೊ :ಸುರಪುರ ವಕೀಲರ ಸಂಘದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಬಾಲ್ಯದ ಜೀವನದಲ್ಲಿ ನಾವುಯಾದ ಅವಮಾನಗಳನ್ನು ಲೆಕ್ಕಿಸದೆ ಉನ್ನತ ಶಿಕ್ಷಣ ಪಡೆದು ಮಾನವರನ್ನು ಮಾನವರಂತೆ ಕಾಣದ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ವಿರುದ್ಧ ಸಿಡಿದೆದ್ದು ಸಮಾನತೆಗಾಗಿ ತಮ್ಮ ಜೀವನವನ್ನೇ ಮುಡಪಾಗಿಟ್ಟು ಹೋರಾಡಿದ ಮಹಾನಾಯಕ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಹೇಳಿದರು.
ಇಲ್ಲಿಯ ವಕೀಲರ ಸಂಘ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜಯಂತಿಯಲ್ಲಿ ಮಾತನಾಡಿದ ಅವರು. ನಿರಂತರವಾಗಿ ಶೋಷಣೆಗೊಳಗಾದ ದಲಿತರಿಗೆ ಸಂವಿಧಾನದ ಮೂಲಕ ಮೀಸಲು ನೀಡುವ ಮುಖಾಂತರ ದಲಿತರಿಗೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಿದ ಅಂಬೇಡ್ಕರ್‌ರವರನ್ನು ನಾವು ಇಂದು ಸ್ಮರಿಸಿಕೊಳ್ಳುವ ಪವಿತ್ರ ದಿನವಾಗಿದೆ ಎಂದರು.
ಕಾರ್ಮಿಕರಿಗೆ, ಕೃಷಿಕರಿಗೆ, ದಲಿತರಿಗೆ, ಶ್ರೀಸಾಮಾನ್ಯರಿಗೂ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿದ ಅವರು ನಮ್ಮ ಪ್ರತಿಯೊಬ್ಬರ ಬಾಳಿನ ಬೆಳಕಾಗಿದ್ದಾರೆ. ಶಿಕ್ಷಣವೇ ಶಕ್ತಿ ಎಂದು ಅದರ ಮಹತ್ವವನ್ನು ತೋರಿಸಿಕೊಟ್ಟರು. ವಕೀಲರಾದ ನಾವು ಇಂದು ಅವರ ಕಾನೂನು ಪಾಲನೆ ಮತ್ತು ಗೌರವಿಸುವುದು ಮಹತ್ತರ ಕರ್ತವ್ಯವಾಗಿದೆ. ಇದರ ಜತೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ವಕೀಲರಾದ ಅಪ್ಪಾಸಾಹೇಬ ಪಾಟೀಲ್ ಹಗರಟಗಿ, ನಂದನಗೌಡ ಪಾಟೀಲ್, ಯಂಕಾರೆಡ್ಡಿ ಹವಲ್ದಾರ್ ಮಾತನಾಡಿದರು. ವಕೀಲರಾದ ಜಿ.ಆರ್.ಬನ್ನಾಳ, ಯಲ್ಲಪ್ಪ ಹುಲಿಕಲ್ ವೇದಿಕೆಯಲ್ಲಿದ್ದರು. ವಕೀಲರಾದ ಅಪ್ಪಣ್ಣ ಗಾಯಕವಾಡ್, ಗೋಪಾಲ ತಳವಾರ, ಎ.ವೆಂಕಟೇಶ, ವಿಶ್ವಾಮಿತ್ರ ಕಟ್ಟಿಮನಿ, ಶಿವಾನಂದ ಅವಂಟಿ, ಆನಂದರೆಡ್ಡಿ ಪಾಟೀಲ್, ಭೀಮಾಶಂಕರ ಬಡಿಗೇರ, ಪ್ರಕಾಶ ಕಟ್ಟಿಮನಿ, ಶರಣಬಸವ ಅನ್ಸೂರು, ಮಂಜುನಾಥ ಗುಡುಗುಂಟಿ, ಮಲ್ಲಯ್ಯ ನಾಯಕ ಸೇರಿ ಇತರರಿದ್ದರು. ನ್ಯಾಯವಾದಿ ಆದಪ್ಪ ಹೊಸಮನಿ ಸ್ವಾಗತಿಸಿದರು. ನಂದಕುಮಾರ ಕನ್ನೆಳ್ಳಿ ನಿರೂಪಿಸಿದರು. ಭೀಮಣ್ಣ ಹೊಸಮನಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!