ರಾಷ್ಟ್ರದ ಏಳಿಗೆಗಾಗಿ ಅವರು ನೀಡಿದ ಕೊಡುಗೆ ಅನನ್ಯ;ಶಾಸಕ ಆರ್ ವಿ ಎನ್




ಸುರಪುರ ಟೈಮ್ಸ್ ವಾರ್ತೆ
ಸುರಪುರ : ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ವಿಶ್ವದ ಸರ್ವಶ್ರೇಷ್ಠ ಸಂವಿಧಾನವನ್ನು ಭಾರತೀಯರಿಗೆ ಕೊಡುಗೆ ನೀಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಅವರು ಭದ್ರ ಬುನಾದಿ ಹಾಕಿ ರಾಷ್ಟ್ರದ ಏಳಿಗೆಗಾಗಿ ಅವರು ನೀಡಿದ ಕೊಡುಗೆ ಅನನ್ಯವಾಗಿದೆ
ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 134ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಸಮಾನತೆ, ಭ್ರಾತೃತ್ವವನ್ನೊಳಗೊಂಡಿದೆ. ಎಲ್ಲ ವರ್ಗದ ಅಭ್ಯುದಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಸಮಾಜದಲ್ಲಿ ಸಮಾನತೆ ಹಕ್ಕು ದೊಂದಿಗೆ ಕೊಡುಗೆ ನೀಡಿದ್ದಾರೆ ಎಂದರು.
ಹೈಕೋರ್ಟ್ ನ್ಯಾಯವಾದಿ, ಹೋರಾಟಗಾರ್ತಿ ಭೀಮಪುತ್ರಿ ಸಾವಿತ್ರಿ ಉಪನ್ಯಾಸ ನೀಡಿ, ಬಾಬಾ ಸಾಹೇಬರು ಯಾವುದೋ ಒಂದು ಜಾತಿ, ಧರ್ಮ, ಸಮುದಾಯಕ್ಕೆ ಸಂವಿಧಾನ ರಚನೆ ಮಾಡಲಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾಜದಲ್ಲಿ ನ್ಯಾಯ ಸಿಗಲಿ ಎಂದು ೭ ವರ್ಷ, ೧೧ ತಿಂಗಳು, ೧೭ ದಿನಗಳ ಕಾಲ ಹಗಲು-ರಾತ್ರಿ, ಊಟ-ತಿಂಡಿ ಲೆಕ್ಕಿಸದೆ ಪ್ರಜಾಪ್ರಭುತ್ವದ ವ್ಯವಸ್ಥೆ ಜಾರಿಗೆ ತರಲು ಸಂವಿಧಾನ ರಚಿಸಿದರು ಎಂದರು.
ಅಂಬೇಡ್ಕರ್‌ರವರು ವಿಶ್ವ ನಾಯಕರು, ಜಗತ್ತಿನ 192 ದೇಶಗಳಲ್ಲಿ ಅವರ ಜಯಂತಿ ಆಚರಿಸಲಾಗುತ್ತದೆ. ಅವರು ಬರೆದಿರುವ ಸಂವಿಧಾನ ಮಹಾನ್ ಗ್ರಂಥ. ಎಲ್ಲರೂ ಸಮಾನವಾಗಿರಬೇಕು. ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಕಾರಣ ಎಲ್ಲರೂ ಶಿಕ್ಷಣ ಪಡೆದು ಸಂಘಟಿತರಾಗಿ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೇವರ್ಗಿಯ ಉಪನ್ಯಾಸಕ ಡಾ.ನಿಜಲಿಂಗ ದೊಡ್ಡಮನಿ ಉಪನ್ಯಾಸ ನೀಡಿ, ಬಾಬಾ ಸಾಹೇಬರು ಜಗತ್ತಿನ ಅನೇಕ ದೇಶಗಳ ಸಂವಿಧಾನ ಅಧ್ಯಯನ ಮಾಡಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ಬರೆದುಕೊಟ್ಟರು. ವಿಶ್ವದ ಅನೇಕ ದೇಶಗಳು ಕೂಡ ಅವರ ಜಯಂತಿ ಆಚರಿಸುತ್ತವೆ. ಏ.14 ಬಂತೆಂದರೆ ಭಾರತದ ಕಡೆ ನೋಡುತ್ತಾರೆ. ಕೆನಡಾ, ಅಮೆರಿಕಾ ದೇಶಗಳು ಏ.14 ನ್ನು ದ ಡೇ ಆಫ್ ಅಂಬೇಡ್ಕರ್ ಎಂದು ಸಾಮಾಜಿಕ-ಆರ್ಥಿಕ ನ್ಯಾಯದ ದಿನವನ್ನಾಗಿ ಹೆಮ್ಮೆಯಿಂದ ಆಚರಿಸುತ್ತಾರೆ. ಅಮೆರಿಕಾದ ಎಷ್ಟೋ ಬೀದಿಗಳಿಗೆ ಅಂಬೇಡ್ಕರ್ ಹೆಸರಿದೆ. ಅವರೊಬ್ಬ
ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದರು.
ಜಗತ್ತಿನಲ್ಲಿ 60 ಸಾವಿರ ಪುಸ್ತಕಗಳನ್ನು ಓದಿದ ಏಕೈಕ ಮಾಹಾನ್ ಪಂಡಿತ ಅವರು. ಅಂಬೇಡ್ಕರ್ ಪುಸ್ತಕದಲ್ಲಿದ್ದಾರೆ ಹೀಗಾಗಿ ನಾವು ಪುಸ್ತಕ ಓದಬೇಕು. ಮಹಿಳೆಯರ ಹಕ್ಕುಗಳ ಕುರಿತು ಬರೆದ ಮಾನವತಾವಾದಿ, ಹೆಣ್ಣು ಮಕ್ಕಳಿಗಾಗಿ ತಮ್ಮ ಅಧಿಕಾರ ತ್ಯಾಗ ಮಾಡಿದ ತಂದೆ ಅವರು. ಬಾಬಾ ಸಾಹೇಬರ ಚಿಂತನೆಯಲ್ಲಿರುವ ಗಟ್ಟಿತನ ಮೈಗೊಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ವರಜ್ಯೋತಿ ಬಂತೇಜಿ ಪಂಚಶೀಲ ಬೋಧನೆ ಮಾಡಿ ಸಂದೇಶ ನೀಡಿದ ಅವರು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದಲ್ಲಿ ಬೋಧಿಸತ್ವ, ಸಂವಿಧಾನ ಶಿಲ್ಪಿ, ಮೇರು ವ್ಯಕ್ತಿತ್ವದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅತಿ ಹೆಚ್ಚು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ವಿಶ್ವದ ೧೯೨ಕ್ಕೂ ಹೆಚ್ಚು ರಾಷ್ಟçಗಳು ಅವರನ್ನು ಗೌರವಿಸುತ್ತವೆ ಎಂದರು.
ಎಲ್ಲಿ ಅಧ್ಯಯನ ಇದೆಯೋ ಅಲ್ಲಿ ಅಂಬೇಡ್ಕರ್ ಸಿಗುತ್ತಾರೆ. ಅಧ್ಯಯನ ಮಾಡಬೇಕು, ಜಾಗೃತರಾಗಬೇಕು. ಬೆಳಕಿನ ಬದುಕು ಕಟ್ಟಿಕೊಳ್ಳಬೇಕು. ಅಧ್ಯಯನ ಮಾಡಿದರೆ ಜಯಂತಿ ಅರ್ಥಪೂರ್ಣ, ಬಾಬಾ ಸಾಹೇಬರಿಗೆ ಗೌರವ ಕೊಟ್ಟಂತೆ. ಅವರು ಸಂವಿಧಾನದಲ್ಲಿ ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಿದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿದರು. ಅರಸು ಮನೆತನದ ಯುವರಾಜ ರಾಜಾ ಲಕ್ಷ್ಮೀನಾರಾಯಣ ನಾಯಕ ವಿಶೇಷ ಆಹ್ವಾನಿತರಾಗಿದ್ದರು. ಜಯಂತಿ ಸಮಿತಿ ಅಧ್ಯಕ್ಷ ವೈಜನಾಥ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಜು ಕಟ್ಟಿಮನಿ, ನಗರಸಭೆ ಸದಸ್ಯ ಶಿವುಕುಮಾರ ಕಟ್ಟಿಮನಿ, ಪ್ರಮುಖರಾದ ಪಂಡಿತ ನಿಂಬೂರ್, ವೆಂಕೋಬ ಯಾದವ, ಸೂಗುರೇಶ ವಾರದ, ಶ್ರೀನಿವಾಸ ನಾಯಕ ಬೊಮ್ಮನಳ್ಳಿ, ವೆಂಕಟೇಶ ಹೊಸಮನಿ, ಮಾನಪ್ಪ ಕಟ್ಟಿಮನಿ, ಆದಪ್ಪ ಹೊಸಮನಿ, ರಾಹುಲ್ ಹುಲಿಮನಿ, ಭೀಮರಾಯ ಸಿಂದಗೇರಿ, ಶಿವಲಿಂಗ ಹಸನಾಪುರ, ನಿಂಗಣ್ಣ ಗೋನಾಲ, ವೆಂಕಟೇಶ ಸುರಪುರ, ಗೋಪಾಲ ತಳವಾರ, ಕಾಳಪ್ಪ ವಾಗಣಗೇರಾ, ಚಿನ್ನಪ್ಪ ಸುರಪುರಕರ, ಶಂಕ್ರಪ್ಪ ಶಾಖನವರ, ಗುರುಪ್ಪ ಹುಲಿಕರ್, ಮರೆಪ್ಪ ಜೀವಣಗಿ ಸೇರಿ ಇನ್ನಿತರರ ವೇದಿಕೆಯಲ್ಲಿದ್ದರು. ಬೆಳಗ್ಗೆ ಅಂಬೇಡ್ಕರ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬಾಬಾ ಸಾಹೇಬರ ಪುತ್ಥಳಿಯ ಭವ್ಯ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಜಗದೀಶ ಶಾಖನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಟ್ಟಿಮನಿ ನಿರೂಪಿಸಿ ವಂದಿಸಿದರು.