ಜಾತಿ ಗಣತಿ ಮರು ಸಮೀಕ್ಷೆ ನಡೆಸಲು, ಶ್ರೀ ಗಿರಿ ಸಂಸ್ಥಾನದ ಮಠಾಧ್ಯಕ್ಷರಾದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಒತ್ತಾಯ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಹತ್ತು ವರ್ಷಗಳ ಹಿಂದೆ ನಡೆದ ಜಾತಿ ಜನಗಣತಿಯನ್ನು ಈಗ ಒಪ್ಪಬಾರದು. ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಶ್ರೀ ಗಿರಿ ಸಂಸ್ಥಾನದ ಮಠಾಧ್ಯಕ್ಷರಾದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.
ಸುರಪುರ ಸಮೀಪದ ಶ್ರೀ ಮರಡಿ ಮಲ್ಲಿಕಾರ್ಜುನ ದೇವಸ್ಥಾನ ಲಕ್ಷ್ಮೀಪುರ ಶ್ರೀಗಿರಿ ಸಂಸ್ಥಾನ ಮಠದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆ ಆಗಿರಬಹುದು. ಜನಸಂಖ್ಯೆ ಸಹ ಹೆಚ್ಚಳವಾಗಿದೆ. ಇದನ್ನು ಸೂಕ್ಷ್ಮವಾಗಿ ಅರಿತು ಮರು ಸಮೀಕ್ಷೆ ಮಾಡಿಸಬೇಕು ಎಂದರು. ಬಹುತೇಕರು ತಮ್ಮ ಮನೆಗೆ ಸಮೀಕ್ಷೆ ಮಾಡಲು ಬಂದಿಲ್ಲ. ನಮಗೆ ವಿಚಾರವೇ ಗೊತ್ತಿಲ್ಲ, ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ. ತಮ್ಮನ್ನು ಯಾರೂ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿಲ್ಲ. ಜಾತಿ ಜನಗಣತಿ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸಿ,

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಸಮೀಕ್ಷೆ ಮಾಡಿಸಬೇಕು. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಸಿಇಟಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಪರೀಕ್ಷೆ ಸಮಯದಲ್ಲಿ ಇಂತಹ ಗೊಂದಲ ಉಂಟಾಗದಂತೆ ತಡೆಯಲು ಸಮಸ್ಯೆ ನಿವಾರಣೆಗೆ ತಜ್ಞರ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು. ಸಿಇಟಿ ನಿಯಮಗಳನ್ನು ಮೊದಲು ತಿಳಿದುಕೊಳ್ಳಬೇಕಿದೆ. ಅವರವರ ಆಚರಣೆಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಧಾರ್ಮಿಕ ಆಚರಣೆಗಳನ್ನು ಒಪ್ಪಬೇಕಾಗುತ್ತದೆ. ಆದರೆ ಕೆಲವರು ಬುರ್ಖಾ ಹಾಕಿಕೊಂಡು ಬರುತ್ತೇನೆ ಎನ್ನುತ್ತಾರೆ. ಕೆಲವರು ಇನ್ನೇನೋ ಹಾಕಿಕೊಂಡು ಬರುತ್ತೇನೆ ಎನ್ನುತ್ತಾರೆ. ಆಗ ಗೊಂದಲ ಉಂಟಾಗುತ್ತದೆ ಇದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹರಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!