ವಿಶ್ವಕ್ಕೆ ಸಮಾನತೆ ಸಾರಿದ ಪ್ರಥಮಚಾರ್ಯರು ಶ್ರೀ ಜಗದ್ಗುರು ರೇಣುಕಾಚಾರ್ಯರು;ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಪರಶಿವನ ವಾಣಿಯಂತೆ ಧರ್ಮ ಸಂರಕ್ಷಣೆಗಾಗಿ, ಲೋಕ ಕಲ್ಯಾಣಕ್ಕೆ ಭಗವಂತನಾಗಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಕ್ಕೆ ಸಮಾನತೆ ಸಾರಿದ ಪ್ರಥಮಚಾರ್ಯರು.ಯುಗ ಯುಗದಲ್ಲೂ ಅವತರಿಸಿದ ಅದ್ವಿತೀಯ ಯುಗ ಪುರುಷ ಎಂದು ಲಕ್ಷ್ಮಿ ಪುರ ಶ್ರೀಗಿರಿ ಮಠ ಸಂಸ್ಥಾನದ ಪೀಠಾಧಿಪತಿ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದ ಅವರು, ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ಮದ್ ಆದಿ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವ ಸಾರಿದರು. ಅವರು ಬೋಧಿಸಿದ ಮಾನವೀಯತೆಯ ಧರ್ಮದ ಸೂತ್ರಗಳು ಸರ್ವರಿಗೂ ದಾರಿ ತೋರುತ್ತವೆ ಎಂದರು.
ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರುಶಾಂತಮೂರ್ತಿ ಶಿವಾಚಾರ್ಯರುಸಂದೇಶ ನೀಡಿ, ಶ್ರೇಷ್ಠ ಅಧ್ಯಾತ್ಮಿಕ ಸಾಧಕರು, ತತ್ವಜ್ಞಾನಿಗಳು ಹಾಗೂ ಸಮಾಜ ಸುಧಾರಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ತೆಲಂಗಾಣ ರಾಜ್ಯದ ಕೊಲ್ಲಿಪಾಕ ಎಂಬಲ್ಲಿ ಜನಿಸಿದರು. ಶ್ರೀ ರೇಣುಕರು ಅನುಗ್ರಹಿಸಿದ ಶಿವಾದ್ವೆಂತ ಸಿದ್ದಾಂತ ಸಾರವೇ ವೀರಶೈವ ಧರ್ಮದ ಶ್ರೇಷ್ಠ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಅತ್ಯುದ್ಭುತ ಸಂದೇಶವನ್ನು ಸಾರಿದ್ದಾರೆ ಎಂದರು.
ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿ ಸಂದೇಶ ನೀಡಿ. ಮಾನವನ ದಾನವ ಗುಣಗಳನ್ನು ದಹಿಸಿ ಆತನನ್ನು ಮಹದೇವನ್ನಾಗಿಸುವ ಅಪೂರ್ವ ಸಿದ್ಧಾಂತವನ್ನು ನೀಡಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಅವರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜ ಸುಧಾರಣೆಗೆ ಸಹಕಾರಿಯಾಗಿವೆ. ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಕೊಲ್ಲಿಪಾಕದಲ್ಲಿ ೧೮ ಮಠಗಳನ್ನು ಕಟ್ಟಿಸಿದರು. ಅವರು ಬೋಧಿಸಿದ ಧರ್ಮ ಸೂತ್ರಗಳು ಸಕಲರ ಬಾಳಿಗೆ ದಾರಿ ದೀಪವಾಗಿವೆ ಎಂದರು.
ಮುಖಂಡರಾದ ಶಿವರಾಜ ಕಲಕೇರಿ, ಡ್ಯಾನಿ ಮುದ್ನೂರು ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ಮಲ್ಲಯ್ಯ ದಂಡು ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗನೂರಿನ ಶರಣಪ್ಪ ಶರಣರು ವೇದಿಕೆಯಲ್ಲಿದ್ದರು. ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಸುನೀಲ್ ಪಂಚಾಗ ಮಠ ಸೇರಿ ಸಮಾಜದ ಅನೇಕ ಮುಖಂಡರು, ಬಾಂಧವರು, ಇತರೆ ಸಮಾಜದ ಮುಖಂಡರು ಇದ್ದರು. ಮಲ್ಲಿಕಾರ್ಜುನ ಕಟ್ಟಮನಿ ನಿರೂಪಿಸಿದರು. ಸಾಯೆಬರೆಡ್ಡಿ ಇಟಗಿ ವಂದಿಸಿದರು. ಜಯಂತ್ಯುತ್ಸವದ ಪೂರ್ವದಲ್ಲಿ ನಗರದಲ್ಲಿ ಬೆಳಗ್ಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ನಂತರ ತಹಸಿಲ್ ಕಚೇರಿಯಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಜಯಂತಿಗೆ ಚಾಲನೆ ನೀಡಲಾಯಿತು.

