ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ;ಸುಗೂರೇಶ ವಾರದ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ

ಸುರಪುರ;ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ಧರ್ಮಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರ ನಿರ್ದೇಶನದಂತೆ ಅಶಕ್ತರನ್ನು ಗುರುತಿಸಿ ಅವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿ ಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜನಜಾಗೃತಿ ವೇದಿಕೆ ಜಿಲ್ಲಾ ಕೋಶಾಧ್ಯಕ್ಷ ಸುಗೂರೇಶ ವಾರದ ಹೇಳಿದರು. ತಾಲೂಕಿನ ಚಂದ್ಲಾಪುರ ಗ್ರಾಮದಲ್ಲಿ ಅಶಕ್ತ ಮಹಿಳೆ ಕಾಂತಮ್ಮನವರಿಗೆ ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಯೋಜನೆಯಡಿ ಭಾನುವಾರ ಮನೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಉತ್ತಮ ಆದಾಯ ಇರುವವರಿಗೆ ಸಮಾಜದ ಜನರ ಬಗ್ಗೆ ಕಾಳಜಿ ಇರುವುದಿಲ್ಲ. ಆದರೆ ಧರ್ಮಸ್ಥಳದ ಪೂಜ್ಯರು ಈ ನಾಡಿನ ಹಳ್ಳಿ ಹಳ್ಳಿಗಳಲ್ಲೂ ಗ್ರಾಮಾಭಿವೃದ್ಧಿಗಳ ಮೂಲಕ ಸಮಾಜದ ಜನರಿಗೆ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ ಎಂದರು. ಧರ್ಮಸ್ಥಳದಲ್ಲಿ ವಿವಿಧ ರೀತಿಯ ದಾನ, ಧರ್ಮಗಳು ಎಲ್ಲರಿಗೂ ತಿಳಿದಿದೆ. ಆದರೆ, ಈಗ ನಮ್ಮ ಕಣ್ಣು ಮುಂದೆಯೇ ಇಂತಹ ಪುಣ್ಯ ಕಾರ್ಯಕ್ರಮ ನೋಡುವ ಭಾಗ್ಯ ನಮ್ಮದಾಗಿದೆ. ಈ ಭಾಗದ ಜನ ಜೀವನದ ಸುಧಾ ರಣೆಗೆ ಬ್ಯಾಂಕಿನ ಸಹಭಾಗಿತ್ವದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ತುಂಬಾ ಅನೂಕುಲವಾಗಿದೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ಮಾತನಾಡಿ, ಒಬ್ಬ ಮಹಿಳೆಯ ಕಷ್ಟಮಹಿಳೆಗೆ ಮಾತ್ರ ತಿಳಿದಿದೆ ಎನ್ನುವ ಮಾತಿನಂತೆ ಮಾತೋಶ್ರೀ ಹೇಮಾವತಿ ಹೆಗ್ಗಡೆಯವರು ತೀರಾ ಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿ ಆಸರೆ ಆಗುತ್ತಿರುವುದು ಹೆಮ್ಮೆಯ ವಿಚಾರ. ಮಹಿಳೆಯರಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಈ ಜ್ಞಾನವಿಕಾಸದಂತ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು. ನ್ಯಾಯವಾದಿ ಜಯಲಲಿತಾ ಪಾಟೀಲ್, ರಾಘವೇಂದ್ರ, ವಿಶ್ವನಾಥ, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸಂತೋಷ.ಎ.ಎಸ್. ಜ್ಞಾನವಿಕಾಸ ಸಮನ್ವಯಾಧಿಕಾರಿ, ವಲಯದ ಮೇಲ್ವಿಚಾರಕರು. ಸೇವಾ ಪ್ರತಿನಿಧಿಗಳು ಇದ್ದರು.
ಜಿಲ್ಲೆಯಲ್ಲಿ 28 ವಾತ್ಸಲ್ಯ ಮನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಲ್ಲಿ ಪೂಜ್ಯರು ಸಮಾಜಮುಖಿಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಒಬ್ಬವ್ಯಕ್ತಿಯ ಜೀವನದಲ್ಲಿ ಅಗತ್ಯತೆಗೆ ಸಹಕಾರಿಯಾಗುವ ಎಲ್ಲಾ ಮಾದರಿಯ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನರ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹೇಮಾವತಿ ಅಮ್ಮನವರ ಆಶಯದಂತೆ ವಾತ್ಸಲ್ಯಮಯ ಕಾರ್ಯಕ್ರಮದಡಿಯಲ್ಲಿ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 28 ವಾತ್ಸಲ್ಯ ಮನೆ ನಿರ್ಮಿಸಿ ಸೂಕ್ತ ಫಲಾನುಭವಿಗೆ ಹಸ್ತಾಂತರ ಮಾಡಲಾಗಿದೆ. ಕಷ್ಟದಲ್ಲಿರುವ ಕುಟುಂಬದ ಕಣ್ಣೀರು ಒರೆಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಮಾಡಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಕಮಲಾಕ್ಷ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!