ಏ.10 ರವರೆಗೆ ಕಾಲುವೆಗೆ ನಿರಂತರ ನೀರು ಹರಿಸಲು ಆಗ್ರಹ; ಮಲ್ಲಿಕಾರ್ಜುನ ಸತ್ಯಂಪೇಟೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ ವತಿಯಿಂದ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಪದ ಹಸನಾಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಗುವುದು. ಏ.10 ರವರೆಗೆ ಕಾಲುವೆಗೆ ನೀರು ಹರಿಸದಿದ್ದರೆ ಯಾವುದೇ ಬೆಳೆ ಬರಲು ಸಾಧ್ಯವೇ ಇಲ್ಲ. ಒಂದು ವೇಳೆ ನೀರು ಹರಿಸದಿದ್ದರೆ ರೈತರಿಗೆ ಮರಣ ಶಾಸನ ಬರೆದ ಕೆಟ್ಟ ಹೆಸರು ಈ ಸರಕಾರಕ್ಕೆ ಬರುತ್ತದೆ. ನೀರು ಹರಿಸಿದರೆ ರೈತರ ಬೆಳೆ ಉಳಿಯುತ್ತವೆ ಇನ್ನೊಂದು ಆತ್ಮಹತ್ಯೆ ತಡೆಗಟ್ಟೆದಂತೆ ಆಗುತ್ತದೆ ಎಂದರು.
ನೀರು ಬಿಡದಿದ್ದರೆ ಎಲ್ಲ ಕಡೆಗಳಲ್ಲಿ ಚಳುವಳಿಗಳು ಬಿರುಸುಗೊಳ್ಳುತ್ತವೆ. ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತವೆ ಇದಕ್ಕೆ ನೇರ ಹೊಣೆ ಸರಕಾರವೇ ಆಗುತ್ತದೆ ಎಂದು ಎಚ್ಚರಿಸಿದ ಅವರು, ನೀರಿನ ವಿಷಯದಲ್ಲಿ ಯಾರೇ ಹೋರಾಟ ಮಾಡಿದರು ರೈತ ಸಂಘ ನೈತಿಕವಾಗಿ ಬೆಂಬಲಿಸುತ್ತದೆ. ಪಕ್ಷ ಭೇದ, ಜಾತಿ, ಧರ್ಮ ಮಾಡುವುದಿಲ್ಲ. ನೀರಿನ ಹೋರಾಟದಲ್ಲಿ ನಮ್ಮ ಸಂಘದ ಎಲ್ಲ ಮುಖಂಡರು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ತೆಲಂಗಾಣಕ್ಕೆ ರಾತೋರಾತ್ರಿ ೨ ಟಿಎಂಸಿ ನೀರು ಹರಿಸುವ ಅವಶ್ಯಕತೆಯಿರಲಿಲ್ಲ. ಈಗ ಇಲ್ಲಿಯ ಅನ್ನದಾತರು ತೊಂದರೆ ಅನುಭವಿಸುವಂತಾಗಿದೆ. ರಾಜ್ಯ ಸರಕಾರದ ರೈತ ವಿರೋಧಿ ನಿಲುವುಗಳಿಂದ ಆತಂಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಮಾತನಾಡಿ, ಜಲಾಶಯದಲ್ಲಿ ನೀರಿದ್ದರು ಸಹ ಮರೆಮಾಚುವ ಕೆಲಸ ನಡೆದಿದೆ ಇದು ಸರಿಯಾದ ಧೋರಣೆ ಅಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಮಾಡುತ್ತಿರುವ ತಪ್ಪು ಧೋರಣೆಗಳನ್ನು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಗಮನಿಸಬೇಕು. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರೂ ಕೋಟಿ ಮೊತ್ತದ ಬೆಳೆ ಬೆಳೆÀದು ನಿಂತಿದೆ. ನೀರು ಹರಿಸದಿದ್ದರೆ ಕೇವಲ ರೈತರು ಮಾತ್ರ ನಷ್ಟ ಅನುಭವಿಸುವುದಿಲ್ಲ ಗೊಬ್ಬರ, ಕ್ರಿಮಿನಾಶಕ ಕೊಟ್ಟ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾರೆ. ಸಾವಿರಾರು ಟನ್ ಅಕ್ಕಿ ಉತ್ಪಾದನೆ ನಿಂತು ಹೋಗುತ್ತದೆ ಎಂದರು.
ಸರಕಾರ, ಜಿಲ್ಲಾ ಉಸ್ತುವಾರಿ ಮತ್ತು ಶಾಸಕರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಕೊಯ್ನಾ ಜಲಾಶಯದಿಂದ ೪ ಟಎಂಸಿ ಹರಿಸಿಕೊಳ್ಳಬೇಕು ಇದರಿಂದ ಏ.10 ವರೆಗೆ ನೀರು ಬಿಡಲು ಸಾಧ್ಯವಾಗುತ್ತದೆ. ರೈತರ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತವೆ. ಮಂಗಳವಾರ ಬೆಳಗ್ಗೆ 11ಗಂಟೆಗೆ ಹೋರಾಟ ಆಯೋಜಿಸಲಾಗಿದೆ. ನಮ್ಮ ಹೋರಾಟ ಜನ ವಿರೋಧಿ ಹೋರಾಟ ಅಲ್ಲ. ನಾವು ಯಾರಿಗೂ ತೊಂದರೆ ಕೊಟ್ಟವರಲ್ಲ. ಕಾರಣ ನಾಗರಿಕರು ವ್ಯಾಪಾರಸ್ಥರು, ಎಲ್ಲಾ ಪಕ್ಷದವರು ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟೀಲ್ ಮಾತನಾಡಿ, ಕಳೆದ ವರ್ಷ ನೀರಿಲ್ಲ ಅಂದಾಗ ರೈತ ಸಂಘ ೨೨ ದಿನಗಳವರೆಗೆ ಸತತವಾಗಿ ಕೆಬಿಜೆಎನ್‌ಎಲ್ ಕಚೇರಿ ಮುಂದೆ ಹೋರಾಟ ಮಾಡಿದಾಗ 2 ಟಿಎಂಸಿ ನೀರು ಹರಿಸಲಾಯಿತು. ಬೇಸಿಗೆ ಪೂರ್ತಿ ಮುಗಿದರೂ ಸಹ ಡ್ಯಾಂನಲ್ಲಿ ಇನ್ನೂ ನೀರು ಇತ್ತು. ಡ್ಯಾಂನಲ್ಲಿ ನೀರಿಲ್ಲ ಎಂದು ಆತಂಕ ಸೃಷ್ಟಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಳೆದ ವರ್ಷ ಯಾವ ರೀತಿ ರೈತರ ಕೈಹಿಡಿಯಲಾಯಿತೊ ಅದೇ ರೀತಿ ಈ ವರ್ಷವೂ ಏ.10 ರವರೆಗೆ ಕಾಲುವೆಗೆ ನೀರು ಹರಿಸಿ ಬೆಳೆಗಳ ಮತ್ತು ರೈತರ ಜೀವ ಉಳಿಸಬೇಕು ಎಂದು ಒತ್ತಾಯಿಸಿದರು. ನೀರು ಹರಿಸದಿದ್ದರೆ ನಮ್ಮ ಸಂಘದಿಂದ ನಿರಂತರ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಬುಚ್ಚಪ್ಪ ನಾಯಕ, ಮಲ್ಲಪ್ಪ ಹುಬ್ಬಳ್ಳಿ ಕುಂಬಾರಪೇಟೆ ಮಾತನಾಡಿದರು. ಮುಖಂಡರಾದ ದೇವಿಂದ್ರಪ್ಪ ಪತ್ತಾರ, ತಿಮ್ಮಯ್ಯ ತಳವಾರ, ರಾಮಯ್ಯ ಆಲ್ಹಾಳ, ಮಹಾದೇವಪ್ಪ ಬಿರಾದಾರ್, ಮಲ್ಕಣ್ಣ ಚಿಂತಿ ಮಂಡಗಳ್ಳಿ, ಬಸವರಾಜ ದೊಡ್ಡಮನಿ, ವೀರಭದ್ರಪ್ಪ ತಳವಾರಗೇರಾ, ಬಸವರಾಜ ಕೊಡಗನೂರ ದೇವತ್ಕಲ್ ಸೇರಿದಂತೆ ಉಪಸ್ಥಿತರಿದ್ದರು.

