ತಹಸೀಲ್ದಾರ ಕಚೇರಿಯಲ್ಲಿ ಕುಡಿಯುವ ನೀರಿಲ್ಲ ,ಹೊರಗಡೆ ಅಕ್ಕಪಕ್ಕದ ಅಂಗಡಿಯ ನೀರೆ ಗತಿ…..

ಸುರಪುರ ಟೈಮ್ಸ್ ವಾರ್ತೆ

ಸುರಪುರ;ಬೇಸಿಗೆ ಶುರುವಾಗಿ ತಿಂಗಳಾಗಿದೆ. ಬಿಸಿಲಿನ ಧಗೆ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕಚೇರಿ ಕೆಲಸಗಳಿಗೆ ಬರುವ ಜನ ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ತಾಲೂಕು ಆಡಳಿತದಲ್ಲಿ ಕುಡಿಯಲು ನೀರಿಲ್ಲ.

ತಾಲೂಕು ಕಚೇರಿ ಅಂದರೆ ತಾಲೂಕಿನ ಪೂರ್ತಿ ಆಡಳಿತವನ್ನು ನೋಡಿಕೊಳ್ಳುವ ಸ್ಥಳ. ಜನರ ಸಮಸ್ಯೆ ಏನೇ ಇದ್ದರೂ ಅದಕ್ಕೆ ಪರಿಹಾರ ಕೊಡುತ್ತಾರೆ. ಆದರೆ ಸುರಪುರ ತಹಸೀಲ್ದಾರ ಕಚೇರಿಯಲ್ಲಿಯೇ ಕುಡಿಯಲು ನೀರಿಲ್ಲ.
ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಬಿಸಿಲು ಬಹಳ. ದೂರದ ಹಳ್ಳಿಗಳಿಂದ ಜನ ತಮ್ಮ ಕೆಲಸಕ್ಕೆಂದು ತಾಲೂಕು ಕಚೇರಿಗೆ ಬಂದರೆ ಕಚೇರಿಯಲ್ಲಿ ಕುಡಿಯಲು ಹನಿ ನೀರು ಸಹ ಸಿಗುವುದಿಲ್ಲ. ಹೀಗಾಗಿಯೇ ಜನ ಅಕ್ಕಪಕ್ಕದ ಅಂಗಡಿಯ ಬಿಸ್ಲೇರಿ ನೀರನ್ನು ಖರೀದಿಸಿ, ಕುಡಿಯುವಂತಾಗಿದೆ. ಹಣವಂತರು ನೀರು ಕೊಂಡುಕೊಳ್ಳುತ್ತಾರೆ, ಬಡವರು ಏನು ಮಾಡಬೇಕು ಎಂದು ತಾಲೂಕಿನ ಜನ ಪ್ರಶ್ನಿಸುತ್ತಾರೆ.

ಅವ್ಯವಸ್ಥೆಯ ಗೂಡಾಗಿದೆ
ತಾಲೂಕಿನ ಎಲ್ಲ ಸಮಸ್ಯೆಗಳನ್ನ ಪರಿಹರಿಸೋ ತಾಲೂಕು ಕಚೇರಿಯೇ ಅವ್ಯವಸ್ಥೆಯ ಗೂಡಾಗಿದೆ. ವಿವಿಧ ಕೆಲಸಗಳಿಗೆ ನಿತ್ಯ ನೂರಾರು ಜನ ಕಚೇರಿಗೆ ಬರುತ್ತಾರೆ. ಹೀಗೆ ಬಂದ ಜನ ಬಾಯಾರಿಕೆಯಿಂದ ನೀರು ಕುಡಿಯೋಣವೆಂದು ಕೊಂಡರೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಇನ್ನು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲು ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡುತ್ತಾರೆ. ಆದರೆ ತಾಲೂಕು ಆಡಳಿತ ಕಚೇರಿಯಲ್ಲೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ವಿಪಯಾರ್ಸವೇ ಸರಿ. ಸಮಸ್ಯೆಗೆ ಪರಿಹಾರ ನೀಡುವ ತಾಲೂಕು ಕಚೇರಿಯಲ್ಲೇ ಹೀಗಾದರೆ ಜನಸಾಮಾನ್ಯರ ಗತಿ ಏನು ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಗಬ್ಬು ನಾರುತಿರು ತಾಲೂಕು ಆಡಳಿತ ಶೌಚಾಲಯ

ಬಯಲು ಮುಕ್ತ ಗ್ರಾಮ ಅಂತೆ… ಸ್ವಚ್ಛ ಭಾರತ, ಹಿಂಗ ಹತ್ತ ಹಲವಾರು ಯೋಜನೆ ಬರತಾವ್… ಇದರ್ ಪಕ್ಕಾ ಲಾಭಆಗುದ್ ಜನರಿಗಲ್ಲ… ಸರಕಾರ ನಡೆಸುವವರಿಗೆ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಅಷ್ಟೇ… ಹೊರತು ಯಾರಿಗೂ ಆಗಲ್ಲ…ಹೌದ್….ನಾಗರಿಕ ಸಮಾಜಕ್ಕೆ ಅತ್ಯಂತ ಅವಶ್ಯವಿರುವ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯಗಳ ಕೊರತೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ವಿವಿಧ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರುವ ಸಾರ್ವಜನಿಕರಿಗೆ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಖಾಲಿ ಜಾಗ ಮತ್ತು ವಾಹನಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಮಹಿಳೆಯರ ಸ್ಥಿತಿ ಇನ್ನೂ ಕಷ್ಟಕರವಾಗಿದೆ.‌ಮಹಿಳೆಯರು, ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಸುರಕ್ಷತಾ ದೃಷ್ಟಿಯಿಂದ ಸಮರ್ಪಕ ಸಾವರ್ಜನಿಕ ಶೌಚಾಲಯಗಳು ಅತ್ಯಗತ್ಯ. ಆದರೆ, ಸುರಪುರ ತಸೀಲ ಕಚೇರಿಗೆ ಬರುವ ಇವರ ಪರಿಸ್ಥಿತಿ ಹೇಳತೀರದಾಗಿದೆ. ಬಯಲು ಶೌಚಾಲಯ ಮುಕ್ತ ಎಂಬ ಸರ್ಕಾರದ ಘೋಷಣೆಗಳು ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿವೆ. ಅನುಷ್ಠಾನಕ್ಕೆ ತರಲು ನಿರಾಸಕ್ತಿ ತೋರುತ್ತಿವೆ. ಗೌರವ ಮತ್ತು ಘನತೆಯ ಸಂಕೇತವಾಗಿರುವ ಶೌಚಾಲಯಗಳ ನಿರ್ಮಾಣ ಮತ್ತು ಸಮರ್ಪಕ ನಿರ್ವಹಣೆಗೆ  ಮುಂದಾಗಬೇಕು ಎಂದು ದಲಿತ ಸಂಘಟನೆಯ ಮುಖಂಡ ರಾಹುಲ್ ಹುಲಿಮನಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!