ದಲಿತರ ವಿರುದ್ಧ ದೌರ್ಜನ್ಯ; ಆರೋಪಿಗಳ ಬಂಧನಕ್ಕೆ ಒತ್ತಾಯ,ಏ.2ರಂದು ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ; ದಲಿತ ಮುಖಂಡರ ಎಚ್ಚರಿಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ದಲಿತರ ಮೇಲೆ ಮೇಲ್ವರ್ಗದವರು ದೌರ್ಜನ್ಯ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ದಲಿತರಿಗೆ ನ್ಯಾಯ ಕೊಡಿಸಲು ಆಗದಿದ್ದರೆ ಏ.೨ರಂದು ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಸಂಸ (ಪ್ರೊ.ಟಿ. ಕೃಷ್ಣಪ್ಪನವರು ಸ್ಥಾಪಿಸಿದ) ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಿಸಿ ತಿಂಗಳು ಗತಿಸುತ್ತಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಇದನ್ನು ಗಮನಿಸಿದರೆ ಪೊಲೀಸ್ ಠಾಣೆ ಭ್ರಷ್ಟಾಚಾರದಲ್ಲಿ ಮುಳಗಿದೆ ಎಂಬುದಾಗಿ ಭಾಸವಾಗುತ್ತಿದೆ. ತಾಲೂಕಿನಲ್ಲಿ ಹಣ ಕೊಟ್ಟವರ ಪರವಾಗಿ ಕೆಲಸ ಮಾಡುತ್ತಿದೆ. ಬಡವರು, ದೀನ ದಲಿತರಿಗೆ ಕೇಳುವವರು ಇಲ್ಲದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟರ ಸಭೆಗಳು ಠಾಣೆಯಲ್ಲಿ ನೆಪಕ್ಕೆ ಮಾತ್ರ ನಡೆಯುತ್ತಿವೆ. ಜೂಜಾಟಕ್ಕೆ ಕುಮ್ಮಕ್ಕು ನೀಡುತ್ತಾ ಪುಡಾರಿಗಳ ಮಾತಿಗೆ ಬೆಲೆಯಿದ್ದು, ದಲಿತರಿಗೆ ನ್ಯಾಯ ಗಗನ ಕುಸಮವಾಗಿದೆ. ಕೋರ್ಟ್ ಮೂಲಕವೇ ಕೇಸ್ ದಾಖಲಿಸುವಂತಾಗಿರುವುದು ದಲಿತರಿಗೆ ಸ್ಥಳವಾಕಾಶವಿಲ್ಲ. ಉಳ್ಳವರಿಗಿದೆ ಎಂಬಂತಾಗಿದೆ ಎಂದು ದೂರಿದರು.
ಮುಖಂಡ ಎಚ್.ಆರ್. ಬಡಿಗೇರ ಮಾತನಾಡಿ, ಪೊಲೀಸರು ರಾಜಕೀಯ ಕೈಗೊಂಬೆಯಾಗಿದ್ದಾರೆ. ಉಳ್ಳವರಿಗೆ ಆದ್ಯತೆ ನೀಡುತ್ತಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ಏ.2ರಂದು ಗಾಂಧಿವೃತ್ತದಿಂದ ಮೆರವಣಿಗೆ ಹೊರಟು ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಮುಖಂಡರಾದ ನಾಗರಾಜ ಓಕಳಿ, ಸದಾಶಿವ ಬೊಮ್ಮನಹಳ್ಳಿ, ರಾಮಪ್ಪ ಕೋರೆ, ಭೀಮಣ್ಣ ಅಡ್ಡೊಡಗಿ, ಅನಿಲ ಕಟ್ಟಿಮನಿ, ಮಾನಪ್ಪ ಶೆಳ್ಳಗಿ, ಹಣಮಂತ, ಗೋಪಾಲ, ಸಾಯಬಣ್ಣ ಬಡೇಸಾಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

