ವೀರ ತಪಸ್ವಿ ಶ್ರೀ ಚನ್ನವೀರ ಶಿವಾಚಾರ್ಯರ ಜಾತ್ರೆ | ಕಾಶಿ ಜಗದ್ಗುರುಗಳ ಆಶೀರ್ವಚನ, “ಆಧ್ಯಾತ್ಮ ಬದುಕಿನ ನಿಜವಾದ ಸಂಪತ್ತು”
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಬದುಕಿನಲ್ಲಿ ಅಧ್ಯಾತ್ಮ ನಿಜವಾದ ಸಂಪತ್ತು. ಮನುಷ್ಯನ ಸುಖ, ಶಾಂತಿ ಬದುಕಿಗೆ ಅಧ್ಯಾತ್ಮ ಜೀವನ ಸಹಕಾರಿಯಾಗಿದೆ ಎಂದು ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಾಗವತ್ಪಾದರು ತಿಳಿಸಿದರು.ತಾಲೂಕಿನ ತಳವಾರಗೇರಾ ಗ್ರಾಮದ ಆರಾಧ್ಯ ದೈವ ಶ್ರೀ ವೀರ ತಪಸ್ವಿ ಚನ್ನವೀರ ಶಿವಾಚಾರ್ಯ ಸ್ವಾಮೀಜಿಯ ೧೭ನೇ ವರ್ಷದ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಕ್ತರು ಅಧ್ಯಾತ್ಮಿಕ ಚಿಂತನೆ, ಪರೋಪಕಾರ, ದಾನ-ಧರ್ಮ, ಭಕ್ತಿಯಿಂದ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು.
ಧಾರ್ಮಿಕ ನಂಬಿಕೆ ಮೇಲೆ ಮನುಷ್ಯನ ಬದುಕಿನ ಶ್ರೇಷ್ಠತೆ ಅಡಗಿದೆ. ಪ್ರತಿಯೊಬ್ಬರು ಅಧ್ಯಾತ್ಮದ ಕಡೆಗೆ ಒಲವು ತೋರಬೇಕು. ಜೀವನದಲ್ಲಿ ಗುರುವಿನ ಕೃಪೆ ಅಗತ್ಯ. ಸದಾ ಗುರುಗಳ, ಸಂತರ, ಶರಣರ ಸದ್ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ತಿಳಿಸಿದರು. ಮಾಗಣಗೇರಿ ಬ್ರಹನ್ಮಠದ ಪೀಠಾಧಿಪತಿ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರವಚನದಲ್ಲಿ ಭಕ್ತರು ಇದ್ದರು.
ಸಮಾಜಮುಖಿ ಕೆಲಸ
ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಮಠಗಳ ಕೊಡುಗೆ ಸಾಕಷ್ಟಿದೆ. ಅನ್ನ, ಅಕ್ಷರ, ಆಶ್ರಯ ಸೇರಿ ತ್ರಿವಿಧ ದಾಸೋಹದ ಜತೆಗೆ ಅಧ್ಯಾತ್ಮ, ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕೆಲಸ ಮಾಡುತ್ತಿವೆ. ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿವೆ. ಮನೆಯಲ್ಲಿ ಮಕ್ಕಳಿಗೆ ಸುಶಿಕ್ಷಣ, ಸುಸಂಸ್ಕೃತ, ಸಂಸ್ಕಾರ, ಪರಂಪರೆ ನೀಡಬೇಕು. ಪ್ರತಿಯೊಬ್ಬರು ತಂದೆ-ತಾಯಿ ಸೇವೆ ಮಾಡಬೇಕು. ಗಳಿಸಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ಸತ್ಕಾರ್ಯಕ್ಕೆ ಬಳಸಬೇಕು ಎಂದು ಕಾಶಿ ಜಗದ್ಗುರು ತಿಳಿಸಿದರು.
ಭವ್ಯ ರಥೋತ್ಸವ ಇಂದು
ಇಂದು ಶ್ರೀ ವೀರ ತಪಸ್ವಿ ಚನ್ನವೀರ ಶಿವಾಚಾರ್ಯರ ರಥೋತ್ಸವ ನಿಮಿತ್ತ ಬೆಳಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ, ಅಯ್ಯಚಾರ, ಸಾಮೂಹಿಕ ವಿವಾಹ, ಧರ್ಮಸಭೆ, ಪ್ರಸಾದ ವಿತರಣೆ, ಸಂಜೆ ೬ ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
