ಚನ್ನವೀರ ಶಿವಾಚಾರ್ಯರ ಜಾತ್ರೆ | ಸಾಮೂಹಿಕ ವಿವಾಹ |                                 ಕಾಶಿ ಜಗದ್ಗುರುಗಳ ಹಿತೋಪದೇಶ,                           ಸತಿ-ಪತಿಗಳು ಪ್ರೀತಿ-ವಿಶ್ವಾಸದಿಂದ ಜೀವಿಸಲಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಪ್ರೀತಿ, ತಾಳ್ಮೆ, ಸಹನೆ, ನೆಮ್ಮದಿ ಸಂಸಾರ ಮತ್ತು ವಿಶ್ವಾಸ ಸೂತ್ರಗಳನ್ನು ನೂತನ ಸತಿ-ಪತಿಗಳಿಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಾಗವತ್ಪಾದರು ತಿಳಿಸಿದರು.
ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ವೀರ ತಪಸ್ವಿ ಚನ್ನವೀರ ಶಿವಾಚಾರ್ಯರ 17ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮತ್ತು ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನವದಂಪತಿಗಳು ಜೀವನದಲ್ಲಿ ಶಾಂತಿ, ಸಮಾಧಾನ, ಗುರು-ಹಿರಿಯರಿಗೆ ಗೌರವಿಸುವ ಮನೋಭಾವ ಬೆಳೆಸಿಕೊಂಡು ಸಂಸಾರ ಸಾಗಿಸಬೇಕು ಎಂದು ತಿಳಿಸಿದರು.
ಜೀವನದಲ್ಲಿ ಕಷ್ಟ-ಸುಖ ಎರಡೂ ಬರುತ್ತವೆ. ಸತಿ-ಪತಿಗಳಾದವರು ಒಬ್ಬರಿಗೊಬ್ಬರು ಅರಿತು ನಡೆದರೆ ಜೀವನ ಸುಂದರವಾಗುತ್ತದೆ. ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿದ್ದು, ಪ್ರತಿ ವರ್ಷ ವೀರ ತಪಸ್ವಿ ಚನ್ನವೀರ ಶಿವಾಚಾರ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
4 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಗಣಗೇರಿ ಬ್ರಹನ್ಮಠದ ವಿಶ್ವರಾಧ್ಯ ಶಿವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀಪುರ ಶ್ರೀಗಿರಿ ಸಂಸ್ಥಾನ ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ನಾಗನಟಗಿ ಮಠದ ಪೂಜ್ಯರು ವೇದಿಕೆಯಲ್ಲಿದ್ದರು. ಪ್ರಮುಖರಾದ ಜಗದೀಶ ರೆಡ್ಡಿ, ಮಲ್ಲಣ್ಣ ಸಾಹುಕಾರ ಮುಧೋಳ, ಕೆ.ಅಣ್ಣಾರಾವ್, ಮಲ್ಲಣ್ಣ ಹುಬ್ಬಳ್ಳಿ, ಸಂತೋಷ ರಾಜಲಬಂಡಿ, ಸಾಹೇಬಗೌಡ ಪಾಟೀಲ್, ಶರಬಯ್ಯಸ್ವಾಮಿ, ಬಸವರಾಜ ಸಜ್ಜನ್, ವೀರಭದ್ರಯ್ಯಸ್ವಾಮಿ, ರಾಮಚಂದ್ರ ದೊರೆ, ಸಿದ್ರಾಮಪ್ಪ ತಲಗೇರಿ, ನಾಗಯ್ಯಸ್ವಾಮಿ, ಶಿವಾನಂದಸ್ವಾಮಿ, ನರಸಯ್ಯ ಗಳದಿನ್ನಿ, ಮಾನಪ್ಪ ಹುಜರತಿ ಸೇರಿ ಅನೇಕ ಗಣ್ಯರು, ಭಕ್ತರು ಇದ್ದರು. ವಾಸುದೇವ ಅರಸಿಕೇರೆ ನಿರೂಪಿಸಿ ವಂದಿಸಿದರು. ಸಂಜೆ ಜಾತ್ರೆ ನಿಮಿತ್ತವಾಗಿ ರಥೋತ್ಸವ ಅದ್ಧೂರಿಯಾಗಿ ಜರುಗಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಧನ್ಯತೆ ಅರ್ಪಿಸಿದರು.

ಬಾಕ್ಸ್
ಪೂಜ್ಯರ ಸಾನ್ನಿಧ್ಯದಲ್ಲಿ ಜರುಗುವ ಸಾಮೂಹಿಕ ವಿವಾಹಗಳು ಪವಿತ್ರ ಮತ್ತು ಶ್ರೇಷ್ಠವಾಗಿವೆ. ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ನೂತನ ದಂಪತಿಗಳ ಮಧ್ಯ ಪರಸ್ಪರ ಹೊಂದಾಣಿ ಬಹಳ ಮುಖ್ಯ. ತಂದೆ-ತಾಯಂದಿರನ್ನು ಗೌರವದಿಂದ ಕಾಣಬೇಕು.
-ವಿಶ್ವರಾಧ್ಯ ಶಿವಾಚಾರ್ಯ
ಬ್ರಹನ್ಮಠ, ಮಾಗಣಗೇರಿ

ಬಾಕ್ಸ್
ಸಾಮೂಹಿಕ ವಿವಾಹಗಳು ಭಾಗ್ಯವಂತರ ಮದುವೆಗಳು. ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ನೂತನ ದಂಪತಿಗಳು ಅನೋನ್ಯವಾಗಿ ಬಾಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು.
-ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ
ಶ್ರೀಗಿರಿ ಸಂಸ್ಥಾನ ಮಠ, ಲಕ್ಷ್ಮೀಪುರ

ಫೋಟೊ : ಸುರಪುರ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಜರುಗಿದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಕಾಶಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಫೋಟೊ:ಸುರಪುರ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಜರುಗಿದ ಅಯ್ಯಾಚಾರ ದೀಕ್ಷೆ ಕಾಶಿ ಜಗದ್ಗುರುಗಳು ನೀಡಿದರು.

Leave a Reply

Your email address will not be published. Required fields are marked *

error: Content is protected !!