ಸುರಪುರ ತಾಲ್ಲೂಕು ಕಚೇರಿ: ಅಡ್ಡಾದಿಡ್ಡಿ ವಾಹನ ನಿಲುಗಡೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಪರಿಣಾಮ, ಕಚೇರಿ ಕೆಲಸ, ಸರ್ಕಾರದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಕಚೇರಿಗೆ ಬರುತ್ತಿದ್ದರೂ ವಾಹನಗಳ ನಿಲುಗಡೆಗೆ ಅಗತ್ಯ ಪಾರ್ಕಿಂಗ್ ವ್ಯವಸ್ಥೆ ಮಾಡದಿರುವುದು ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಎಂದು ಸಾರ್ವಜನಿಕರು ದೂರಿದ್ದಾರೆ.
ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಇಲಾಖೆ, ಖಜಾನೆ ಇಲಾಖೆ, ಆಧಾರ್ ತಿದ್ದುಪಡಿ ಕೇಂದ್ರ, ಕಂದಾಯ ಇಲಾಖೆ, ಆಹಾರ ಇಲಾಖೆ, ಸರ್ವೇ ಇಲಾಖೆ ಮುಂತಾದ ಹಲವು ಶಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುತ್ತಿವೆ.
ಎಲ್ಲ ಇಲಾಖೆಗಳು ಒಂದೆಡೆ ಇರುವುದರಿಂದ ಸಹಜವಾಗಿ ತಾಲ್ಲೂಕು ಕಚೇರಿಗೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಕಚೇರಿಗೆ ಬರುವವರ ಪೈಕಿ ಹೆಚ್ಚಿನವರು ದ್ವಿಚಕ್ರ ವಾಹನಗಳಲ್ಲಿ ಬರುವುದರಿಂದ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ಹೀಗಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಹಾಗೂ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದಾರೆ.
ಅಧಿಕಾರಿಗಳ ವಾಹನಗಳ ನಿಲುಗಡೆಗೂ ನಿರ್ಧಿಷ್ಟವಾದ ಸ್ಥಳಾವಕಾಶ ಇಲ್ಲ. ನಾಗರಿಕರ ಜೊತೆಗೆ ನೌಕರರೂ ಮನ ಬಂದಕಡೆ ವಾಹನಗಳನ್ನು ನಿಲುಗಡೆ ಮಾಡಿ ಹೋಗುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.
ಪಾರ್ಕಿಂಗ್ ಶೆಲ್ಟರ್ ಇದ್ದು ಇಲ್ಲದಂತಾಗಿದೆ
ಸುರಪುರ ತಾಲ್ಲೂಕು ಕಚೇರಿಗೆ ಪ್ರತಿನಿತ್ಯ ಜನರು ಹೆಚ್ಚಾಗಿ ಬೈಕ್‌ನಲ್ಲಿ ಬಂದು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಕಚೇರಿ ಸ್ವಲ್ಪ ದೂರದಲ್ಲಿ ಪಾರ್ಕಿಂಗ್ ಶೆಲ್ಟರ್ ಇದು ಇಲ್ಲದಂತಾಗಿದೆ ಎಂದು ರಾಹುಲ್ ಹುಲಿಮನಿ ಹೇಳಿದರು.
ಕೂರಲು ಇನ್ನೂ ಹೆಚ್ಚು ಆಸನ, ಮಹಿಳೆಯರಿಗೆ ಶೌಚಾಲಯ ಬೇಕು’
ಸರ್ಕಾರದ ಸೇವೆಗಳನ್ನು ಪಡೆಯಲು ಬರುವ ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹಿರಿಯ ನಾಗರಿಕರಿಗೆ ಕೂರಲು ಆಸನಗಳ ಕೊರತೆ ಇದೆ. ನಿಂತು ನಿಂತು ಬೇಸತ್ತು ಅನಿವಾರ್ಯವಾಗಿ ಕೆಳಗೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಡಳಿತ ಹಿರಿಯ ನಾಗರಿಕ ಹಿತದೃಷ್ಟಿಯಿಂದ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



ತಾಲ್ಲೂಕು ಕಚೇರಿಯ ಮೇಲ್ಭಾಗದಲ್ಲಿ ಮಹಿಳೆಯರ ಶೌಚಾಲಯವಿದ್ದು ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಅಶುಚಿತ್ವ ಕಾಡುತ್ತಿರುವುದರಿಂದ ಮಹಿಳೆಯರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ರಾಹುಲ್ ಹುಲಿಮನಿ ದೂರಿದರು.