ಗೋಪಣ್ಣ ಪೂಜಾರಿ ವಾಗನಗೇರಿಯವರಿಗೆ 2024ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ; ಸಗರನಾಡುಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ,ಜನಪದೀಯವಾಗಿ ಶ್ರೀಮಂತಿಕೆಯಿಂದ ಕೂಡಿರುವ ಪ್ರದೇಶವಾಗಿದೆ.ಅಂತೆಯೇ ಈ ನಾಡಿನಲ್ಲಿ ಮುದನೂರಿನ ದಾಸಿಮಯ್ಯ, ಹಾವಿನಾಳ ಕಲ್ಲಯ್ಯ, ತಿಂಥಣಿಯ ಮೌನೇಶ್ವರ, ಕೊಡೇಕಲ್ಲ ಬಸವಣ್ಣ, ಕಡಕೋಳ ಮಡಿವಾಳಪ್ಪ ಮತ್ತು ಜೇವರ್ಗಿ ಷಣ್ಮುಖ ಶಿವಯೋಗಿಗಳಂತಹ ಮಹಾನ ದಾರ್ಶನಿಕರು ಜನ್ಮ ತಾಳಿದ್ದಾರೆ.

ಇಂತಹ ಪವಿತ್ರವಾದ ಸಗರನಾಡಿನ ಹೃದಯ ಭಾಗದಲ್ಲಿ ಬರುವ ಸುರಪುರ ತಾಲೂಕಿನ ಇತಿಹಾಸ ಪ್ರಸಿದ್ಧ ವಾಗಿನಗೇರಾ ಗ್ರಾಮವು ಜಾನಪದೀಯವಾಗಿ ಸಂಪದ್ಭರಿತವಾದ ಗ್ರಾಮವಾಗಿದೆ.ಈ ಗ್ರಾಮದಲ್ಲಿ ಬಾಳಿ ಬದುಕಿದ ಹಲವಾರು ಕಲಾವಿದರು ಸಾವಿರಾರು ಮೊಹರಂ ಪದಗಳು,ಗೀಗೀ ಪದಗಳನ್ನು,ಜನಪದ ಹಾಡುಗಳನ್ನು ಹಾಗೂ ತತ್ವಪದಗಳನ್ನು ಹಾಡಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇಂತವರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರೆ ಶ್ರೀ ಗೋಪಣ್ಣ ಪೂಜಾರಿಯವರು ಸುಮಾರು ನಲವತ್ತು ವರ್ಷಗಳಿಂದ ಗೀಗಿ ಪದಗಳನ್ನು ಜಾನಪದ ಹಾಡುಗಳನ್ನು ಮೊಹರಂ ಪದಗಳನ್ನು ಹಾಗೂ ಭಜನಾಪದಗಳನ್ನು ಹಾಡುತ್ತಾ ತಂಡವನ್ನು ಕಟ್ಟಿಕೊಂಡು ನೂರಾರು ಊರುಗಳನ್ನು ಸುತ್ತಿದ್ದಾರೆ. ಇವರು ಧ್ವನಿಯೇರಿಸಿ ಸುಮಧುರ ಕಂಠದಿಂದ ಹಾಡಿದರೆ ಶೋತೃ ಬಳಗವು ಸಮ್ಮೋಹನಗೊಳ್ಳಬೇಕು ಅಂತಹ ಗಾಯನ ಕಲೆಗಾರಿಕೆ ಇವರಿಗೆ ಸಿದ್ಧಿಸಿದೆ.

ಚಿಕ್ಕಂದಿನಿಂದಲೂ ಭಜನೆ,ಬಯಲಾಟ,ಪೌರಾಣಿಕ ನಾಟಕ ಮತ್ತು ಮೊಹರಂ ಹಾಡುಗಳನ್ನು ಹಾಡುತ್ತಾ ಅವುಗಳ ಬೆಳವಣಿಗೆಗಾಗಿ ಅವಿತರವಾಗಿ ದುಡಿಯುತ್ತಿದ್ದಾರೆ.

ಇವರ ಕಲಾಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ  ಕರ್ನಾಟಕ ಜನಪದ ಅಕಾಡೆಯು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಡೆದಿದ್ದಾರೆ.ಇವರಿಗೆ ಯಾದಗಿರಿಯವರು ೨೦೨೦-೨೧ನೇ ಸಾಲಿನ ಗಿರಿಜನ ಉತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೇ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟರವರು ಸಹ ಪ್ರಶಸ್ತಿ ಪತ್ರ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!