ಬರದೇವನಾಳ ಗ್ರಾಮದ ಶ್ರೀ ಹನುಮಂತ ದೇವರ ಸಂಭ್ರಮದ ರಥೋತ್ಸವ

ಸುರಪುರ ಟೈಮ್ಸ್ ವಾರ್ತೆ

ಕೊಡೇಕಲ್: ಒಂದೇ ಆವರಣದಲ್ಲಿ ಹಲವು ದೇವಸ್ಥಾನಗಳನ್ನು ಹೊಂದಿರುವ ಖ್ಯಾತಿಯನ್ನು ಪಡೆದಿರುವ ಸಮೀಪದ ಬರದೇವನಾಳ ಗ್ರಾಮದಲ್ಲಿ ರಾಮನವಮಿ ದಿನವಾದ ಭಾನುವಾರ ಶ್ರೀ ಹನುಮಂತ ದೇವರ ರಥೋತ್ಸವ ಸಂಭ್ರಮದಿಂದ ದಿಂದ ಜರುಗಿತು.
ಬೆಳಗ್ಗೆಯಿಂದಲೆ ದೇವಸ್ಥಾನಕ್ಕೆ ಭಕ್ತರು ಆಗಮಿಸುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸಿ ಕಾಯಿ ,ಕರ್ಪೂರ ಅರ್ಪಿಸಿದರು. ಸರ್ವಾಲಂಕೃತಗೊಂಡ ಶ್ರೀ ಹನುಮಂತ ದೇವರಿಗೆ ಜಗನ್ನಾಥಾಚಾರ್ಯ ಜೋಶಿ ಅವರು ವಿಶೇಷ ಪೂಜೆಯನ್ನು ನೆರವೇರಿಸಿದರು..ಮಧ್ಯಾಹ್ನ 4 ಗಂಟೆಗೆ ಸಕಲ ವಾದ್ಯಮೇಳಗಳೊಂದಿಗೆ ಹನುಮಂತದೇವರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು.
ಬರದೇವನಾಳ ಗ್ರಾಮದ ನಾಡಿಗೇರ ಮನೆತನದವರಾದ ಕಲ್ಯಾಣರಾವ್ ದೇಶಪಾಂಡೆ ಅವರು ಪರಂಪರಗತವಾಗಿ ಬಂದಿರುವ ಗೋಪಾಳ ಮತ್ತು ಬೆತ್ತವನ್ನು ಹಿಡಿದು ಹಿಂಬರಕಿ ಸೇವೆ ಎಂದರೆ ಪಲ್ಲಕ್ಕಿಯಕಡೇಗೆ ಮುಖಮಾಡಿ ನಡೆಯುತ್ತಾ ವಿಶೇಷ ಸೇವೆ ಸಲ್ಲಿಸಿದರು.ದೇವಸ್ಥಾನದ ಆವರಣದೊಳಗಿರುವ ಎಲ್ಲ ದೇವಸ್ಥಾನಗಳ ಪ್ರದಕ್ಷಿಣೆಯ ನಂತರ ಭವ್ಯವಾದ ರಥದಲ್ಲಿ ವಿರಾಜಮಾನಾದ ಹನುಮಂತದೇವರಿಗೆ ವಿಶೇಷ ಮಂಗಳಾರುತಿ ನೆರವೇರಿದ ಬಳಿ ಭಕ್ತರು ದಿಂಡರಕಿ(ಉರುಳು) ಸೇವೆ ನಡೆಸಿದ ನಂತರ ಜಹಾಗೀರದಾರ ಕಲ್ಯಾಣರಾವ ದೇಶಪಾಂಡೆ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶ್ರೀರಾಮ ಮತ್ತು ಹನುಮಂತ ದೇವರ ಜೈಘೋಷಗಳು ಮುಗಿಲು ಮುಟ್ಟಿದವು. ಈ ವೇಳೆ ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಮೆರೆದರು.
ಜಾತ್ರೆಯ ನಿಮಿತ್ಯವಾಗಿ ಶ್ರೀ ಮಾರುತೇಶ್ವರ ಯುವಕ ಮಂಡಳಿಯ ವತಿಯಿಂದ ಭಕ್ತರಿಗೆ ಪಾನಕ ಮತ್ತು ಕೊಸಂಬರಿ ವಿತರಣೆ ಮಾಡಿದರು. ಗ್ರಾಮದ ವತನದಾರರು, ಪ್ರಮುಖರು, ಪುರೋಹಿತರು, ದೇವಸ್ಥಾನದ ಪೂಜಾರಿಗಳು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಗಮನ ಸಳೆದ ಆರತಿ ಮೇರವಣಿಗೆ: ಇದಕ್ಕೂ ಪೂರ್ವದಲ್ಲಿ ಭಾನುವಾರ ಬೆಳಗಿನ ಜಾವ ನಾಡಿಗೇರ ಮನೆಯಿಂದ ಉತ್ಸವ ಮೂರ್ತಿಯೊಂದಿಗೆ ಹೊರಟ ಪಲ್ಲಕ್ಕಿ ಸಮೀಪವಿರುವ ಹಳ್ಳದಲ್ಲಿ ಗಂಗಾಸ್ನಾನಕ್ಕೆ ತೆರಳಿತು. ಈ ಸಂದರ್ಭದಲ್ಲಿ ಗ್ರಾಮದ ಸುಮಂಗಲೆಯರು ತನಾರತಿಯನ್ನು ಹೊತ್ತುಕೊಂಡು ಪಲ್ಲಕ್ಕಿಯನ್ನು ಸ್ವಾಗತಿಸಿದರು.ಈ ಒಂದು ದೃಶ್ಯ ಇಡಿ ತಾರಾಲೋಕವೇ ಬರದೇವನಾಳ ಗ್ರಾಮದಲ್ಲಿ ಬಂದಿಳಿದಂತೆ ಕಂಡು ಬಂದಿಂತು.ಇದನ್ನು ನೋಡಲೇಂದೇ ನೂರಾರು ಭಕ್ತರು ಆಗಮಿಸಿದ್ದರು.
ಕೊಡೇಕಲ್ ಪೊಲಿಸ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಒದಗಿಸಲಾಗಿತ್ತು. ನಾರಾಯಣಪುರದ ಶ್ರೀ ಗುರುರಾಜ ಭಜನಾ ಮಂಡಳಿ ಮತ್ತುಛಾಯಾ ಭಜನಾ ಮಂಡಳಿ ಅವರು ಭಜನೆ ನಡೆಸಿಕೊಟ್ಟರು.

ಪೋಟೋ:ಕೊಡೇಕಲ್ ಸಮೀಪದ ಬರದೇವನಾಳ ಗ್ರಾಮದಲ್ಲಿ ಭಾನುವಾರ ಸಾವಿರಾರು ಭಕ್ತರ ಮಧ್ಯೆ ಶ್ರೀ ಹನುಮಂತ ದೇವರ ರಥೋತ್ಸವ ವೈಭದಿಂದ ಜರುಗಿತು

Leave a Reply

Your email address will not be published. Required fields are marked *

error: Content is protected !!