ಅಜಗಣ್ಣ, ಮುಕ್ತಾಯಕ್ಕಳ ಶರಣರ ವಚನಗಳು ವ್ಯಕ್ತಿತ್ವ ವಿಕಾಸಕ್ಕೆ ಸ್ಪೂರ್ತಿ ;ಪ್ರಭುಲಿಂಗ ಸ್ವಾಮೀಜಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ವ್ಯಕ್ತಿತ್ವ ವಿಕಾಸಕ್ಕೆ ಬಸವಾದಿ ಶಿವಶರಣರ ವಚನಗಳೇ ಸ್ಪೂರ್ತಿ. ವಚನಗಳು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳಾಗಿವೆ. ವಚನಗಳ ವೈಚಾರಿಕತೆಯಿಂದ ಪ್ರತಿಯೊಬ್ಬ ಮಾನವನ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿ ಹೇಳಿದರು. ಇಲ್ಲಿಯ ನಿಷ್ಠಿ ಕಡ್ಲಪ್ಪನವರ ಮಠದಲ್ಲಿ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿ ಅವರ ೪೯ನೇ ಸ್ಮರಣೋತ್ಸವ ಮತ್ತು ಶರಣ ಚರಿತಾಮೃತ ಪ್ರವಚನದ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದ ಅವರು, ಶರಣರ ವಚನಗಳು ಸಮಾಜದ ವಿವಿಧ ಮುಖಗಳ ಚಿತ್ರವನ್ನು ಬಿಂಬಿಸುವ ಅಮೂಲ್ಯ ರತ್ನಗಳಾಗಿವೆ. ಗದಗ ಜಿಲ್ಲೆಯ ಲಕ್ಕುಂಡಿಯ ಅಜಗಣ್ಣ ಮತ್ತು ಮುಕ್ತಾಯಕ್ಕ ಮೌಲ್ಯಯುತ ವಚನಗಳನ್ನು ರಚಿಸಿದ್ದಾರೆ. ಇವರು ಶಿವಭಕ್ತರು, ಕಾಯಕ ಯೋಗಿಗಳು, ಶ್ರೇಷ್ಠ ವಚನಕಾರರಾಗಿದ್ದರು ಎಂದರು. ದೊಡ್ಡ ಬಸಯ್ಯಶಾಸ್ತ್ರಿ ಹಿರೇಮಠ ಪ್ರವಚನ ನೀಡಿ, ಬಸವಣ್ಣನವರ ಸಮಕಾಲೀನರಾದ ಮುಕ್ತಾಯಕ್ಕ ಮತ್ತು ಅಜಗಣ್ಣ ಶ್ರೇಷ್ಠ ವಚನಕಾರರು. ಮುಕ್ತಾಯಕ್ಕ ತನ್ನ ಅಣ್ಣನಾದ ಅಜಗಣ್ಣನನ್ನೆ ಅಧ್ಯಾತ್ಮಿಕ ಗುರುವೆಂದು ನಂಬಿದ್ದಳು. ಇವರ ವಚನಗಳು ಸಮಾಜ ಪರಿವರ್ತನೆಗೆ ದಾರಿ ದೀಪವಾಗಿವೆ. ಗುರು ಶಿಷ್ಯರಾಗಿ, ತಂದೆ ಮಗಳಾಗಿ, ಇಬ್ಬರೂ ಕಾಯಕ ಜೀವಿಗಳಾಗಿ, ಅಧ್ಯಾತ್ಮಿಕ ಚಿಂತಕರಾಗಿ ಸಮಾಜವನ್ನು ತಿದ್ದಲು ಶ್ರಮಿಸಿ ಈ ನಾಡಿನಲ್ಲಿ ಇಂದಿಗೂ ಅಜಗಣ್ಣ ಮುಕ್ತಾಯಕ್ಕ ಎಂದೇ ಹೆಸರುವಾಸಿಯಾಗಿದ್ದಾರೆ. ಕಾಯಕ ನಿಷ್ಠಿ, ಅಧ್ಯಾತ್ಮಕ ಚಿಂತನೆ, ಭಕ್ತಿಯ ಮೂಲ ಗುರು ಸೇವೆ, ಐಶ್ವರ್ಯ ಮೂಲ ಲಿಂಗಾರ್ಚನೆ, ಮೋಕ್ಷ ಮೂಲ ಘಟಸಂತೃಪ್ತಿ, ಸಾಕು ಎನ್ನುವುದೇ ಸಿರಿತನ, ಬೇಕು ಎನ್ನುವುದೇ ಬಡತನ ಇಂತಹ ಜೀವನಕ್ಕೆ ಹತ್ತಿರವಾಗುವಂತ ವಚನಗಳನ್ನು ನೀಡಿದ ಮಹಾ ಶರಣರು ಎಂದರು. ಶರಣಕುಮಾರ ಯಾಳಗಿ ಮತ್ತು ಶಿವಕುಮಾರ ಕಟ್ಟಿ ಸಂಗಾವಿ ಸಂಗೀತ ಸೇವೆ ನೀಡಿದರು.

ಪ್ರವಚನ ಎಂಬುದು ಹೊಳೆ ಪುರಾಣ, ಪ್ರವಚನ, ಪುಣ್ಯಕಥೆಗಳು ಮನುಷ್ಯನಿಗೆ ಒಳ್ಳೆಯ ಮಾರ್ಗವನ್ನು ತೋರಿಸುತ್ತವೆ. ಪ್ರವಚನ ಎಂಬುದು ಒಂದು ಹೊಳೆ, ಅದರಲ್ಲಿ ನೀ ಇಳಿ, ಅವಗುಣಗಳ ಕಳಿ, ಅಮರನಾಗಿ ಉಳಿ, ನಿನ್ನ ನೀ ತಿಳಿ ಎಂಬುದಾಗಿದೆ. ಪುರಾಣ ಪ್ರವಚನದಿಂದ ಕೆಟ್ಟ ಗುಣಗಳು ಹೋಗಿ ಭಕ್ತಿಯ ಭಾವನೆಗಳು ಬರುತ್ತವೆ. ನಾವೆಲ್ಲರೂ ಸನ್ಮಾರ್ಗದೊಂದಿಗೆ ಭಗವಂತನ ಸ್ಮರಣೆಯಲ್ಲಿ ಸಾಗುವ ವ್ಯಕ್ತಿಗಳಾಗಬೇಕು ಎಂದು ದೊಡ್ಡ ಬಸಯ್ಯಶಾಸ್ತಿç ಹಿರೇಮಠ ಹೇಳಿದರು
ಸಮಾಜದ ಸಂಪತ್ತು ಸಮಾಜದ ನಿಜವಾದ ಸಂಪತ್ತು ಶರಣರ ಸರಳ ವಚನ ಸಾಹಿತ್ಯವಾಗಿದೆ. ಸಮ ಸಮಾಜದ ಪರಿಕಲ್ಪನೆ, ಸರಳ ಜೀವನ, ಸಜ್ಜನರ ಸಂಗ, ಉತ್ತಮ ನಡುವಳಿಕೆ ಸೇರಿ ಇತ್ಯಾದಿಗಳು ಶರಣರ ತತ್ವದ ಅಂಶಗಳು. ವಚನಕಾರರು ತಮ್ಮ ವಚನಗಳ ಮೂಲಕ ಜೀವನದ ಉತ್ತಮ ಮೌಲ್ಯಗಳನ್ನು ಸಾಮಾನ್ಯ ಭಾಷೆಯಲ್ಲಿ ತಿಳಿಸಿದ್ದಾರೆ ಎಂದು ಪ್ರಭುಲಿಂಗ ಸ್ವಾಮೀಜಿ ನುಡಿದರು.